
ಬಳ್ಳಾರಿ, 20 ಆಗಸ್ಟ್ (ಹಿ.ಸ.)
ಆ್ಯಂಕರ್ : ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ‘ಪಾನ್-ಇಂಡಿಯಾ ರೆಸ್ಕ್ಯೂ ಅಂಡ್ ರಿಹೆಬಿಲಿಟೇಶನ್ ಕ್ಯಾಂಪೇನ್’ ಅಡಿಯಲ್ಲಿ ನಡೆಸಲಾದ ಜಂಟಿ ಕಾರ್ಯಾಚರಣೆಯಲ್ಲಿ, ಮೋಕಾ ಹೋಬಳಿ ವ್ಯಾಪ್ತಿಯ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ 6 ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಅಧಿಕಾರಿಗಳ ತಂಡ ಯಶಸ್ವಿಯಾಗಿ ರಕ್ಷಿಸಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, ಉಪ ತಹಶೀಲ್ದಾರರ ಉಪಸ್ಥಿತಿಯಲ್ಲಿ ಗುರುವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಟಾಸ್ಕ್ಫೋರ್ಸ್ ಸಮಿತಿಯ ಸಭೆ ನಡೆಸಲಾಯಿತು. ಸಭೆಯ ನಂತರ ಮೋಕಾ ಹೋಬಳಿಯ ವಿವಿಧ ಉದ್ದಿಮೆ ಹಾಗೂ ಅಂಗಡಿ-ಮುಂಗಟ್ಟುಗಳ ಮೇಲೆ ಟಾಸ್ಕ್ಫೋರ್ಸ್ ತಂಡವು ಆಕಸ್ಮಿಕ ದಾಳಿ ನಡೆಸಿತು. ಈ ವೇಳೆ ನಿಯಮ ಉಲ್ಲಂಘಿಸಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ತಕ್ಷಣವೇ 6 ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ವಶಕ್ಕೆ ಪಡೆಯಲಾಯಿತು.
ಸ್ಥಳದಲ್ಲೇ ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡ ಅಧಿಕಾರಿಗಳು, ನಂತರ ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದರು. ಇದೇ ಸಂದರ್ಭದಲ್ಲಿ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರಿಗೆ ಹಾಗೂ ಮಾಲೀಕರಿಗೆ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ವಿತರಿಸಿ, ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಉಪ ತಹಶೀಲ್ದಾರ್ ಪಾಂಡುರಂಗ, ಕಾರ್ಮಿಕ ನಿರೀಕ್ಷಕ (1ನೇ ವೃತ್ತ) ರಮೇಶ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಶಿಕ್ಷಣ ಸಂಯೋಜಕ ಪ್ರಸನ್ನ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಆರೋಗ್ಯ ಇಲಾಖೆಯ ಗೋವಿಂದಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸುಧಾ, ಮಕ್ಕಳ ಸಹಾಯವಾಣಿಯ (1098) ಚಂದ್ರಕಲಾ, ರೀಚ್ ಸಂಸ್ಥೆಯ ಸಂಯೋಜಕಿ ಬಸಮ್ಮ ಹಾಗೂ ಪ್ಯಾರಾ ಲೀಗಲ್ ಸ್ವಯಂಸೇವಕಿ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್