
ಬಾಗಲಕೋಟೆ, 20 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಧಾನಸಭೆ ಚುನಾವಣೆಗೆ ಇನ್ನೂ ಸುಮಾರು ಒಂದೂವರೆ ವರ್ಷ ಬಾಕಿ ಇರುವ ಸಂದರ್ಭದಲ್ಲೇ ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. 2028ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ಕ್ಷೇತ್ರದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಿದ್ದತೆ ಆರಂಭಿಸಿದ್ದಾರೆ.
ಕಾರಜೋಳ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆ ಕ್ಷೇತ್ರದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮುಂಬರುವ ಚುನಾವಣೆಗೆ ಪಕ್ಷವನ್ನು ತಳಮಟ್ಟದಿಂದಲೇ ಸಜ್ಜುಗೊಳಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು ಹಾಗೂ ಕಳೆದ ಚುನಾವಣೆಯಲ್ಲಿ ಪಕ್ಷದಿಂದ ದೂರ ಉಳಿದವರನ್ನು ಮತ್ತೆ ಸಂಘಟನೆಯತ್ತ ಸೆಳೆಯುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಬಿಜೆಪಿಗರ ಮಹತ್ವದ ಸಭೆ
ಮುಧೋಳ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಳಗೊಂಡಂತೆ ನಡೆದ ಸಭೆಯನ್ನು 2028ರ ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆಯ ಭಾಗವೆಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. 2023ರ ಚುನಾವಣೆಯಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ಗೆ ಕಳೆದುಕೊಂಡಿರುವ ಬಿಜೆಪಿ, ಮುಂದಿನ ಚುನಾವಣೆಯಲ್ಲಿ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಈಗಿನಿಂದಲೇ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಮುಂದಾಗಿದೆ.
ಕ್ಷೇತ್ರದ ಶಾಸಕ ಆರ್.ಬಿ. ತಿಮ್ಮಾಪುರ ಅವರು ಸಚಿವ ಸ್ಥಾನದಿಂದ ವಂಚಿತರಾದ ಬೆನ್ನಲ್ಲೇ ಕಾರಜೋಳ ನೇತೃತ್ವದಲ್ಲಿ ನಡೆದ ಈ ಸಭೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲೂ ಮುಂದಿನ ಚುನಾವಣೆಯ ಲೆಕ್ಕಾಚಾರಗಳು ಆರಂಭವಾಗುವ ಮುನ್ನವೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಫಲಕಾರಿಯಾಗದ ಸಚಿವ ಸ್ಥಾನದ ಪ್ರಯತ್ನ:
ಗೋವಿಂದ ಕಾರಜೋಳ ಅವರು ಸತತ ನಾಲ್ಕು ಬಾರಿ ಮುಧೋಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ ಅವರ ಎದುರು ಸೋಲು ಕಂಡಿದ್ದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಿಮ್ಮಾಪುರ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು.
ಸುಮಾರು ಮೂರು ವರ್ಷಗಳ ಕಾಲ ಸಚಿವರಾಗಿದ್ದ ತಿಮ್ಮಾಪುರ ಅವರು ಮುಖ್ಯಮಂತ್ರಿ ಬದಲಾವಣೆ ಹಾಗೂ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣದ ಸಂಪುಟದಲ್ಲೂ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದರು ಎನ್ನಲಾಗಿತ್ತು. ಆದರೆ ಈ ಪ್ರಯತ್ನ ಫಲಕಾರಿಯಾಗಲಿಲ್ಲ. ಈ ಬೆಳವಣಿಗೆಯ ಬೆನ್ನಲ್ಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಕುತೂಹಲ ಮೂಡಿಸಿವೆ.
ಮತ್ತೆ ಕ್ಷೇತ್ರದತ್ತ ಕಾರಜೋಳರ ಚಿತ್ತ
2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗೋವಿಂದ ಕಾರಜೋಳ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. ಇದರಿಂದಾಗಿ ಮುಧೋಳ ಕ್ಷೇತ್ರಕ್ಕೆ ಅವರ ಭೇಟಿ ಹಾಗೂ ರಾಜಕೀಯ ಚಟುವಟಿಕೆಗಳು ಹಿಂದಿನಷ್ಟಿರಲಿಲ್ಲ.
ಆದರೆ ಇದೀಗ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದ ಬೆಳವಣಿಗೆಗಳು ಸೇರಿದಂತೆ ಹಲವು ರಾಜಕೀಯ ವಿದ್ಯಮಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ಕಾರಜೋಳ ಅವರು ತಮ್ಮ ಹಳೆಯ ಕ್ಷೇತ್ರದತ್ತ ಮತ್ತೆ ಗಮನ ಹರಿಸಿರುವುದು ಗಮನಾರ್ಹವಾಗಿದೆ. ಕ್ಷೇತ್ರದ ಪ್ರಮುಖ ಮುಖಂಡರನ್ನು ಒಂದೆಡೆ ಸೇರಿಸಿ ಸಂಘಟನಾ ಸಭೆ ನಡೆಸಿರುವುದು ಬಿಜೆಪಿಯ ಮುಂದಿನ ಕಾರ್ಯತಂತ್ರದ ಸೂಚನೆಯಾಗಿದೆ ಎನ್ನಲಾಗುತ್ತಿದೆ.
ಕಾರ್ಯಕರ್ತರ ಮನವೊಲಿಕೆಗೆ ಒತ್ತು
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ಪಕ್ಷದಿಂದ ದೂರ ಸರಿದಿರುವ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳನ್ನು ಮತ್ತೆ ಪಕ್ಷದತ್ತ ಕರೆತರುವ ಪ್ರಯತ್ನಕ್ಕೆ ಈಗಿನಿಂದಲೇ ಚಾಲನೆ ನೀಡಬೇಕು ಎಂಬ ಸಂದೇಶವನ್ನು ಸಭೆಯಲ್ಲಿ ನೀಡಲಾಗಿದೆ ಎನ್ನಲಾಗಿದೆ.
ತಪ್ಪು ಗ್ರಹಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಪಕ್ಷ ತೊರೆದಿರುವವರನ್ನು ಮನವೊಲಿಸಿ ಸಂಘಟನೆಯೊಂದಿಗೆ ಮತ್ತೆ ಜೋಡಿಸಿಕೊಳ್ಳಬೇಕು. ಆದರೆ ಪಕ್ಷದ ಸಂಘಟನೆಗೆ ಹಾನಿ ಉಂಟುಮಾಡಬಹುದಾದವರನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೂತ್ ಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಸೂಚನೆ ನೀಡಲಾಗಿದೆ.
ಕ್ಷೇತ್ರ ವಾಪಸ್ಸಾತಿಗೆ ಬಿಜೆಪಿ ತಾಲೀಮು
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಧೋಳ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ಪಡೆಯುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಒಂದು ಕಡೆ ಕಾಂಗ್ರೆಸ್ ಶಾಸಕ ಆರ್.ಬಿ. ತಿಮ್ಮಾಪುರ ಅವರು ತಮ್ಮ ರಾಜಕೀಯ ನೆಲೆ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಸುವ ಸಾಧ್ಯತೆ ಇದ್ದರೆ, ಮತ್ತೊಂದೆಡೆ ಬಿಜೆಪಿ ಕೂಡ ಸಂಘಟನೆಯನ್ನು ಬಲಪಡಿಸುವ ಮೂಲಕ ಕ್ಷೇತ್ರವನ್ನು ಮರಳಿ ಪಡೆಯಲು ಸಿದ್ಧತೆ ನಡೆಸುತ್ತಿದೆ.
ತಿಮ್ಮಾಪುರ ಅವರು ಸಚಿವ ಸ್ಥಾನದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜಕೀಯ ಲೆಕ್ಕಾಚಾರಗಳೂ ಬದಲಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಾರಜೋಳ ಅವರು ಬಿಜೆಪಿ ಸಂಘಟನಾ ಚಟುವಟಿಕೆಗಳಿಗೆ ಚಾಲನೆ ನೀಡಿರುವುದು ಎರಡೂ ಪಕ್ಷಗಳ ನಡುವಿನ ಮುಂದಿನ ರಾಜಕೀಯ ಹಣಾಹಣಿಗೆ ಮುನ್ನುಡಿಯಾಗಿದೆ ಎನ್ನಲಾಗುತ್ತಿದೆ.
ಶುರುವಾಗಲಿದೆ ‘ಕೈ’ ಚಳಕ:
ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾ ಚಟುವಟಿಕೆಗಳು ಚುರುಕುಗೊಂಡಿರುವುದನ್ನು ಕಾಂಗ್ರೆಸ್ ಕೂಡ ನಿರ್ಲಕ್ಷಿಸುವ ಸ್ಥಿತಿಯಲ್ಲಿಲ್ಲ. 2004ರಿಂದ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸಿದ್ದ ಕಾಂಗ್ರೆಸ್, 2023ರ ಚುನಾವಣೆಯಲ್ಲಿ ಮುಧೋಳ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು.
ಹೀಗಾಗಿ ಕಷ್ಟಪಟ್ಟು ಗೆದ್ದಿರುವ ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಮುಂದಾಗುವ ಸಾಧ್ಯತೆ ಇದೆ. ಶಾಸಕ ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಪಕ್ಷದ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಯಲಿದ್ದು, ಬಿಜೆಪಿ ಚಟುವಟಿಕೆಗಳಿಗೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಜಂಗಿ ಕುಸ್ತಿಗೆ ಈಗಿನಿಂದಲೇ ತಾಲೀಮು
ಒಟ್ಟಾರೆ ಮುಧೋಳ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 2028ರ ವಿಧಾನಸಭಾ ಚುನಾವಣೆಯ ಜಂಗಿ ಕುಸ್ತಿಗೆ ಈಗಿನಿಂದಲೇ ತಾಲೀಮು ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿ ಕಳೆದುಕೊಂಡಿರುವ ಕ್ಷೇತ್ರವನ್ನು ಮರಳಿ ಪಡೆಯಲು ಸಂಘಟನಾ ಬಲವರ್ಧನೆಗೆ ಒತ್ತು ನೀಡುತ್ತಿದ್ದರೆ, ಕಾಂಗ್ರೆಸ್ ತನ್ನ ವಶದಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ತಂತ್ರ ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯನ್ನು 2028ರ ವಿಧಾನಸಭಾ ಚುನಾವಣೆಯ ಮೊದಲ ರಣಕಹಳೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಯಿದ್ದು, ರನ್ನನ ನಾಡಿನ ಮುಧೋಳ ಕ್ಷೇತ್ರ ಮತ್ತೊಮ್ಮೆ ರಾಜ್ಯ ರಾಜಕೀಯದ ಗಮನ ಸೆಳೆಯುವ ನಿರೀಕ್ಷೆ ಮೂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande