
ದಾವಣಗೆರೆ, 19 ಆಗಸ್ಟ್ (ಹಿ.ಸ.):
ಆ್ಯಂಕರ್:ಅಪರೂಪದ ಯಕೃತ್ತಿನ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ದಾವಣಗೆರೆಯ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ಸುಮಾರು ಆರು ಗಂಟೆಗಳ ಕಾಲ ನಡೆಸಿದ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಚಿತ್ರದುರ್ಗ ಮೂಲದ ಮಹಿಳೆ ಬೊಜ್ಜು, ಟೈಪ್-2 ಮಧುಮೇಹ ಹಾಗೂ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿಂದ ನಿರಂತರ ಹೊಟ್ಟೆನೋವು ಮತ್ತು ಹಸಿವಿನ ಕೊರತೆಯಿಂದ ಬಳಲುತ್ತಿದ್ದ ಅವರಿಗೆ ತಪಾಸಣೆ ವೇಳೆ ಯಕೃತ್ತಿನಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು.
ಹೆಚ್ಚಿನ ಪರೀಕ್ಷೆಗಳ ಬಳಿಕ ಇದು ಇಂಟ್ರಾಹೆಪಾಟಿಕ್ ಚೋಲಾಂಜಿಯೋಕಾರ್ಸಿನೋಮ ಎಂಬ ಅಪರೂಪದ ಪಿತ್ತನಾಳದ ಕ್ಯಾನ್ಸರ್ ಎಂದು ದೃಢಪಟ್ಟಿತು. ಗಡ್ಡೆಯ ಸ್ಥಳ ಮತ್ತು ಶಸ್ತ್ರಚಿಕಿತ್ಸೆಯ ಸಂಕೀರ್ಣತೆಯಿಂದಾಗಿ ಈ ಹಿಂದೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಹಿಂದೇಟು ಹಾಕಿದ್ದರು.
ಸುಮಾರು 95 ಕೆ.ಜಿ. ತೂಕವಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಅಪಾಯಕಾರಿಯಾಗಿದ್ದ ಹಿನ್ನೆಲೆಯಲ್ಲಿ ಹೃದಯ ಮತ್ತು ಶ್ವಾಸಕೋಶಗಳ ಸಮಗ್ರ ಪರೀಕ್ಷೆ ನಡೆಸಿ, ಶಸ್ತ್ರಚಿಕಿತ್ಸೆಗೆ ಮುನ್ನ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಪರಿಶೀಲಿಸಿದರು.
ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ್ ನೇತೃತ್ವದ ತಂಡವು ಸುಮಾರು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಿತು. ಪಿತ್ತಕೋಶದ ಜೊತೆಗೆ ಯಕೃತ್ತಿನ II, III, IVa ಮತ್ತು IVb ಭಾಗಗಳನ್ನು ತೆಗೆದುಹಾಕಲಾಗಿದ್ದು, ಮಧ್ಯದ ಹೆಪಾಟಿಕ್ ರಕ್ತನಾಳವನ್ನು ಎಚ್ಚರಿಕೆಯಿಂದ ಸಂರಕ್ಷಿಸಲಾಯಿತು.
ಶಸ್ತ್ರಚಿಕಿತ್ಸೆಯ ಕೇವಲ ಆರು ಗಂಟೆಗಳಲ್ಲೇ ಮಹಿಳೆ ದ್ರವಾಹಾರ ಸೇವಿಸಲು ಆರಂಭಿಸಿದರು. ಬಳಿಕ ಮೃದುವಾದ ಆಹಾರ ಸೇವಿಸುವ ಹಂತಕ್ಕೆ ಚೇತರಿಸಿಕೊಂಡ ಅವರು, ಆರೋಗ್ಯ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಐದು ದಿನಗಳಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾದರು.
ಡಾ. ಹನುಮಂತ ನಾಯ್ಕ್ ಮಾತನಾಡಿ, ಗಡ್ಡೆಯ ಗಾತ್ರ, ಅದರ ಸ್ಥಳ, ರೋಗಿಯ ಬೊಜ್ಜು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿತ್ತು. ಆರೋಗ್ಯಕರ ಯಕೃತ್ತಿನ ಭಾಗವನ್ನು ಉಳಿಸಿಕೊಂಡು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ತಂಡದ ಪ್ರಮುಖ ಗುರಿಯಾಗಿತ್ತು ಎಂದು ತಿಳಿಸಿದರು.
ಕೇಂದ್ರದ ಫೆಸಿಲಿಟಿ ಡೈರೆಕ್ಟರ್ ಸುನಿಲ್ ಭಂಡಾರಿಗಲ್ ಮಾತನಾಡಿ, ಹೆಚ್ಚಿನ ಅಪಾಯವಿದ್ದ ರೋಗಿಗೆ ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವುದು ವೈದ್ಯಕೀಯ ತಂಡದ ಪರಿಣತಿ ಮತ್ತು ವಿವಿಧ ವಿಭಾಗಗಳ ಸಮನ್ವಯದ ಆರೈಕೆಯ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.