
ವಿಜಯಪುರ, 19 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲೆಯ ಎಲ್ಲ ಛಾಯಾಗ್ರಾಹಕರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಛಾಯಾಗ್ರಹಣವೆಂದರೆ ಕೇವಲ ಚಿತ್ರ ಹಿಡಿಯುವ ಕೆಲಸವಲ್ಲ; ಅದು ಅಮೂಲ್ಯ ಕ್ಷಣಗಳನ್ನು ಶಾಶ್ವತಗೊಳಿಸುವ ಸೃಜನಶೀಲ ಕಲೆ ಎಂದು ಹೇಳಿದ್ದಾರೆ.
ಮನುಷ್ಯನ ಜೀವನದಲ್ಲಿ ಎದುರಾಗುವ ಅನೇಕ ಸಂತಸದ, ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣಗಳನ್ನು ಛಾಯಾಚಿತ್ರಗಳು ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಸುತ್ತವೆ. ಒಂದು ಕ್ಲಿಕ್ನಲ್ಲಿ ಸೆರೆಹಿಡಿಯುವ ಚಿತ್ರವು ವರ್ಷಗಳ ನಂತರವೂ ಅಂದಿನ ಸಂದರ್ಭ, ಭಾವನೆ ಮತ್ತು ನೆನಪುಗಳನ್ನು ಮರುಜೀವಂತಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಹೃದಯದ ಆಪ್ತ ನೆನಪುಗಳು, ಕುಟುಂಬದ ಸಂಭ್ರಮ, ನಗುವಿನ ಹೊನಲು, ಸಂತೋಷದ ಕ್ಷಣಗಳು, ಸಾಧನೆಯ ಮೈಲಿಗಲ್ಲುಗಳು, ಪ್ರಕೃತಿಯ ಅದ್ಭುತ ಸೌಂದರ್ಯ ಹಾಗೂ ಸಮಾಜ ಮತ್ತು ಇತಿಹಾಸದ ಮಹತ್ವದ ಘಟನೆಗಳನ್ನು ಛಾಯಾಚಿತ್ರಗಳು ಮುಂದಿನ ಪೀಳಿಗೆಗೆ ಪರಿಚಯಿಸುತ್ತವೆ.
ಹೀಗಾಗಿ ಛಾಯಾಗ್ರಹಣವು ಕೇವಲ ವೃತ್ತಿಯಾಗಿರದೆ, ಸಮಾಜದ ಬದುಕು ಮತ್ತು ಇತಿಹಾಸವನ್ನು ದಾಖಲಿಸುವ ಮಹತ್ವದ ಮಾಧ್ಯಮವಾಗಿದೆ ಎಂದು ಎಂ.ಬಿ. ಪಾಟೀಲ ಅವರು ಅಭಿಪ್ರಾಯಪಟ್ಟಿದ್ದಾರೆ.
“ಒಂದು ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ; ಒಂದು ಉತ್ತಮ ಛಾಯಾಚಿತ್ರ ಇತಿಹಾಸವನ್ನೇ ದಾಖಲಿಸುತ್ತದೆ” ಎಂಬ ಮಾತಿನಂತೆ, ಛಾಯಾಗ್ರಾಹಕರು ತಮ್ಮ ಕ್ಯಾಮೆರಾದ ಮೂಲಕ ಸಮಾಜದ ವಿವಿಧ ಕ್ಷೇತ್ರಗಳ ಬೆಳವಣಿಗೆ, ಜನಜೀವನ, ಸಂಸ್ಕೃತಿ, ಪರಂಪರೆ ಹಾಗೂ ಪ್ರಕೃತಿಯ ಸೊಬಗನ್ನು ದಾಖಲಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿ, ಕ್ರೀಡೆ, ರಾಜಕೀಯ, ಕಲೆ, ಸಂಸ್ಕೃತಿ, ಪ್ರಕೃತಿ, ಸಾಮಾಜಿಕ ಹಾಗೂ ಸಾರ್ವಜನಿಕ ಜೀವನದ ಮಹತ್ವದ ಘಟನೆಗಳನ್ನು ತಮ್ಮ ಛಾಯಾಚಿತ್ರಗಳ ಮೂಲಕ ಜನರಿಗೆ ತಲುಪಿಸುವ ಛಾಯಾಗ್ರಾಹಕರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ತಂತ್ರಜ್ಞಾನ ಬೆಳೆಯುತ್ತಿರುವ ಇಂದಿನ ಕಾಲದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಹೊಸ ತಲೆಮಾರಿನ ಛಾಯಾಗ್ರಾಹಕರು ಆಧುನಿಕ ತಂತ್ರಜ್ಞಾನವನ್ನು ಸೃಜನಶೀಲವಾಗಿ ಬಳಸಿಕೊಂಡು ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಹಣ ಕ್ಷೇತ್ರದ ಸಾಧಕರನ್ನು ಗೌರವಿಸುವ ಹಾಗೂ ಈ ಕಲೆಯ ಮಹತ್ವವನ್ನು ಸಮಾಜಕ್ಕೆ ಮತ್ತೊಮ್ಮೆ ನೆನಪಿಸುವ ವಿಶೇಷ ದಿನವಾಗಿದೆ. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗೆ ಸಚಿವ ಎಂ.ಬಿ. ಪಾಟೀಲ ಅವರು ಶುಭಾಶಯಗಳನ್ನು ಸಲ್ಲಿಸಿ, ಅವರ ಸೃಜನಶೀಲ ಪ್ರಯತ್ನಗಳು ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande