ಜಲಸಾರಿಗೆ ಆಸರೆ; ಸುರಕ್ಷತೆಗೆ ಬೇಕಿದೆ ಹೆಚ್ಚಿನ ಕಾಳಜಿ
ಬಾಗಲಕೋಟೆ, 19 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದ ಆಸಂಗಿ–ಮಹಿಷವಾಡಗಿ ನಡುವಿನ ಕೃಷ್ಣಾ ನದಿಯಲ್ಲಿ ಬೋಟ್ ಸೇವೆ ಪುನರಾರಂಭಗೊಂಡಿದ್ದು, ಈ ಭಾಗದ ನೂರಾರು ಜನರಿಗೆ ಸಂಚಾರಕ್ಕೆ ಅನುಕೂಲವಾಗಿದೆ. ಮಳೆಗಾಲದಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್
ಡೋಣಿ


ಬಾಗಲಕೋಟೆ, 19 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಸಮೀಪದ ಆಸಂಗಿ–ಮಹಿಷವಾಡಗಿ ನಡುವಿನ ಕೃಷ್ಣಾ ನದಿಯಲ್ಲಿ ಬೋಟ್ ಸೇವೆ ಪುನರಾರಂಭಗೊಂಡಿದ್ದು, ಈ ಭಾಗದ ನೂರಾರು ಜನರಿಗೆ ಸಂಚಾರಕ್ಕೆ ಅನುಕೂಲವಾಗಿದೆ. ಮಳೆಗಾಲದಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದ ಬೋಟ್ ಸಂಚಾರ ಇದೀಗ ನೀರಿನ ಹರಿವು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಆರಂಭಗೊಂಡಿದೆ.

ನೆರೆಯ ಬೆಳಗಾವಿ ಜಿಲ್ಲೆಯ ಗಡಿಯನ್ನು ಸಂಪರ್ಕಿಸುವ ಕೃಷ್ಣಾ ನದಿಯಲ್ಲಿ ಆಸಂಗಿ ಹಾಗೂ ಮಹಿಷವಾಡಗಿ ನಡುವಿನ ಜಲಸಾರಿಗೆ ಬಹಳ ಹಿಂದಿನಿಂದಲೂ ಸ್ಥಳೀಯರ ಪ್ರಮುಖ ಸಂಚಾರ ವ್ಯವಸ್ಥೆಯಾಗಿದೆ. ಆಸಂಗಿಯಿಂದ ಮಹಿಷವಾಡಗಿ ನಡುವೆ ಸುಮಾರು 500 ಮೀಟರ್ಗಳಷ್ಟು ನದಿ ದಾಟಿದರೆ ಎರಡೂ ಭಾಗದ ಗ್ರಾಮಗಳು ಪರಸ್ಪರ ಸಂಪರ್ಕ ಹೊಂದುತ್ತವೆ. ಹೀಗಾಗಿ ಎರಡೂ ಬದಿಯ ಜನರು ವ್ಯಾಪಾರ, ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬೋಟ್ ಸೇವೆಯನ್ನೇ ಅವಲಂಬಿಸಿದ್ದಾರೆ.

10 ನಿಮಿಷದಲ್ಲಿ ನದಿ ದಾಟುವ ಅವಕಾಶ

ಬನಹಟ್ಟಿಯಿಂದ ಹಿಪ್ಪರಗಿ, ಮಹಿಷವಾಡಗಿಗೆ ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಸುಮಾರು 50 ಕಿ.ಮೀ. ದೂರ ಸಂಚರಿಸಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸಮಯ ಹಾಗೂ ಹಣ ವ್ಯಯವಾಗುತ್ತದೆ. ಆದರೆ ಆಸಂಗಿ–ಮಹಿಷವಾಡಗಿ ನಡುವೆ ಜಲಸಾರಿಗೆ ಬಳಸಿಕೊಂಡರೆ ಕೇವಲ 10 ನಿಮಿಷಗಳಲ್ಲಿ ನದಿ ದಾಟಬಹುದಾಗಿದೆ. ಪ್ರಯಾಣಿಕರಿಗೆ ಸುಮಾರು ₹10ರಿಂದ ₹20ರೊಳಗಿನ ವೆಚ್ಚದಲ್ಲಿ ಸಂಚಾರ ಸಾಧ್ಯವಾಗುತ್ತಿರುವುದು ಈ ಸೇವೆಯ ಪ್ರಮುಖ ಅನುಕೂಲವಾಗಿದೆ.

ಪ್ರತಿನಿತ್ಯ ನೂರಾರು ಜನರು ಬೋಟ್ ಮೂಲಕ ನದಿ ದಾಟುತ್ತಿದ್ದು, ಹಲವು ಬೈಕ್ಗಳನ್ನೂ ಬೋಟ್ಗಳಲ್ಲಿ ಸಾಗಿಸಲಾಗುತ್ತಿದೆ. ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿ ಸಂಚಾರ ಸಾಧ್ಯವಾಗುತ್ತಿರುವುದರಿಂದ ಸ್ಥಳೀಯರಿಗೆ ಜಲಸಾರಿಗೆ ಅತ್ಯಂತ ಉಪಯುಕ್ತವಾಗಿದೆ.

ಸುರಕ್ಷತಾ ಕ್ರಮಗಳ ಕೊರತೆ

ಜಲಸಾರಿಗೆ ಜನರಿಗೆ ಅನುಕೂಲವಾಗಿದ್ದರೂ ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ಮಾತ್ರ ಗಂಭೀರ ಪ್ರಶ್ನೆಗಳು ಎದುರಾಗಿವೆ.

ಬೋಟ್ಗಳಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹಾಗೂ ಬೈಕ್ಗಳನ್ನು ಸಾಗಿಸಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಸಂಗಿ ಗ್ರಾಮದ ನೇಮಿನಾಥ ಬಡಿಗೇರ ಅವರು

ಆರೋಪ ಮಾಡಿದ್ದಾರೆ.

ಬೋಟ್ಗಳಲ್ಲಿ ಜೀವ ರಕ್ಷಕ ಜಾಕೆಟ್, ರಿಂಗ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳ ಕೊರತೆ ಕಂಡುಬರುತ್ತಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿದರೆ ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂಬುದು ಆಸಂಗಿ ಹಾಗೂ ಮಹಿಷಾವಡಿಗ ಗ್ರಾಮಗಳ ಜನರು ಒತ್ತಾಯಿಸಿದ್ದಾರೆ.

ಬೋಟ್ಗಳಿಗೆ ಪ್ರಯಾಣಿಕರು ಹಾಗೂ ಬೈಕ್ಗಳನ್ನು ದಡದಲ್ಲಿಯೇ ಹತ್ತಿಸಿಕೊಂಡು ನದಿ ಮಧ್ಯಭಾಗಕ್ಕೆ ತೆರಳಿದ ನಂತರ ಪ್ರಯಾಣಿಕರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬುದು ಮತ್ತೊಂದು ಸಮಸ್ಯೆಯಾಗಿದೆ. ಪ್ರತಿ ಪ್ರಯಾಣಿಕರಿಂದ ಸುಮಾರು ₹10 ಶುಲ್ಕ ಪಡೆಯಲಾಗುತ್ತಿದ್ದು, ನದಿ ಮಧ್ಯದಲ್ಲಿ ಬೋಟ್ ನಿಲ್ಲಿಸಿ ಹಣ ಸಂಗ್ರಹಿಸುವ ಕ್ರಮ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ದಡದಲ್ಲಿಯೇ ಶುಲ್ಕ ಪಡೆದು, ಯಾವುದೇ ಕಾರಣಕ್ಕೂ ನಡುನೀರಿನಲ್ಲಿ ಬೋಟ್ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅತಿಯಾದ ಭಾರದಿಂದ ಆತಂಕ

ಒಂದೊಂದು ಬೋಟ್ನಲ್ಲಿ ಸರಿಸುಮಾರು 30ರಿಂದ 35 ಬೈಕ್ಗಳು ಹಾಗೂ 40ರಿಂದ 50 ಪ್ರಯಾಣಿಕರನ್ನು ಏಕಕಾಲದಲ್ಲಿ ಕರೆದೊಯ್ಯಲಾಗುತ್ತಿದೆ ಎನ್ನಲಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ಪ್ರಯಾಣಿಕರು ಹಾಗೂ ವಾಹನಗಳನ್ನು ಸಾಗಿಸುವುದರಿಂದ ಬೋಟ್ಗಳು ಭಾರಕ್ಕೆ ತಕ್ಕಂತೆ ಓಲಾಡುವ ಅನುಭವ ಉಂಟಾಗುತ್ತದೆ. ಇದು ಪ್ರಯಾಣಿಕರಲ್ಲಿ ಆತಂಕ ಮೂಡಿಸುತ್ತಿದೆ.

ಬೋಟ್ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯಾಣಿಕರು ಹಾಗೂ ಬೈಕ್ಗಳ ಸಂಖ್ಯೆಗೆ ಮಿತಿ ನಿಗದಿಪಡಿಸಬೇಕು. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಹಾಗೂ ವಾಹನಗಳನ್ನು ಸಾಗಿಸದಂತೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಜಲಸಾರಿಗೆ ಮತ್ತಷ್ಟು ಸುರಕ್ಷಿತವಾಗಲಿ

ಆಸಂಗಿ–ಮಹಿಷವಾಡಗಿ ನಡುವಿನ ಜಲಸಾರಿಗೆ ಈ ಭಾಗದ ಜನರಿಗೆ ಸಮಯ ಮತ್ತು ಹಣ ಉಳಿತಾಯ ಮಾಡುವ ಪ್ರಮುಖ ಸಂಚಾರ ವ್ಯವಸ್ಥೆಯಾಗಿದೆ. ರಸ್ತೆ ಮಾರ್ಗದ ದೂರವನ್ನು ಕಡಿಮೆ ಮಾಡುವ ಮೂಲಕ ಸ್ಥಳೀಯರಿಗೆ ಬಹುದೊಡ್ಡ ಅನುಕೂಲ ಕಲ್ಪಿಸುತ್ತಿರುವ ಈ ಸೇವೆಯನ್ನು ಮತ್ತಷ್ಟು ಸುಧಾರಿಸುವ ಅಗತ್ಯವಿದೆ.

ಬೋಟ್ಗಳ ನಿಯಮಿತ ತಪಾಸಣೆ, ಪ್ರಯಾಣಿಕರ ಸಂಖ್ಯೆಗೆ ಮಿತಿ, ಜೀವ ರಕ್ಷಕ ಪರಿಕರಗಳ ಕಡ್ಡಾಯ ಬಳಕೆ, ನಡುನೀರಿನಲ್ಲಿ ಶುಲ್ಕ ವಸೂಲಿ ಮಾಡದಂತೆ ಕ್ರಮ ಹಾಗೂ ನುರಿತ ನಾವಿಕರ ನಿಯೋಜನೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಜಲಸಾರಿಗೆ ಇನ್ನಷ್ಟು ವಿಶ್ವಾಸಾರ್ಹವಾಗಲಿದೆ.

ಜನರ ಸಂಚಾರಕ್ಕೆ ಆಸರೆಯಾಗಿರುವ ಈ ಜಲಸಾರಿಗೆ ವ್ಯವಸ್ಥೆ ಸುರಕ್ಷಿತವಾಗಿ ಹಾಗೂ ನಿರಂತರವಾಗಿ ಮುಂದುವರಿಯುವಂತೆ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆ ಗಮನಹರಿಸಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande