
ವಿಜಯಪುರ, 19 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ‘ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆ’ಯಡಿ ಸಿಂದಗಿ ನಗರಸಭೆ ವ್ಯಾಪ್ತಿಯ ನೂರಾರು ಬಡ ಕುಟುಂಬಗಳು ಹಾಗೂ ಶ್ರಮಜೀವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ಮನಗೂಳಿ ಅವರು, ಸ್ವಂತ ನಿವೇಶನ ಹಾಗೂ ಸೂರು ಹೊಂದಬೇಕು ಎಂಬುದು ಪ್ರತಿಯೊಂದು ಬಡ ಕುಟುಂಬದ ಬಹುದಿನಗಳ ಕನಸಾಗಿದೆ. ಆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅದರ ಭಾಗವಾಗಿ ಸಿಂದಗಿ ನಗರಸಭೆ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಸ್ವಂತ ಸೂರಿನ ಕನಸು ಕಂಡಿದ್ದ ತಾಯಂದಿರು, ಶ್ರಮಿಕರು ಹಾಗೂ ಬಡ ಕುಟುಂಬಗಳ ಮುಖದಲ್ಲಿ ಹಕ್ಕುಪತ್ರ ಪಡೆದ ಸಂದರ್ಭದಲ್ಲಿ ಮೂಡಿದ ನೆಮ್ಮದಿಯ ಮಂದಹಾಸವೇ ನಮ್ಮ ಶಕ್ತಿಯಾಗಿದೆ. ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಸ್ವಂತ ಸೂರು ಹಾಗೂ ನೆಮ್ಮದಿಯ ಬದುಕು ಕಲ್ಪಿಸಬೇಕು ಎಂಬ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶಾಸಕ ಮನಗೂಳಿ ತಿಳಿಸಿದರು.
ವರ್ಷಗಳ ಕಾಲ ಸ್ವಂತ ನಿವೇಶನದ ನಿರೀಕ್ಷೆಯಲ್ಲಿದ್ದ ಅನೇಕ ಕುಟುಂಬಗಳಿಗೆ ಹಕ್ಕುಪತ್ರ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬಡವರು, ಶ್ರಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬದುಕಿನಲ್ಲಿ ಭದ್ರತೆ ಮೂಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.
ಹಕ್ಕುಪತ್ರ ಪಡೆದ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿ, ಸ್ವಂತ ನಿವೇಶನ ಹೊಂದುವ ಮೂಲಕ ಮನೆ ನಿರ್ಮಾಣದ ಕನಸಿಗೆ ಹೊಸ ಭರವಸೆ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande