
ವಿಜಯಪುರ, 19 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಬುಧವಾರ ಬೆಳಗ್ಗೆ 8 ಗಂಟೆಯಿಂದಲೇ ವಿಜಯಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿ, ಪಂಚಾಯಿತಿ ಆಡಳಿತ, ಅಧಿಕಾರಿ–ಸಿಬ್ಬಂದಿ ಹಾಜರಾತಿ, ಸಾರ್ವಜನಿಕ ಸೇವೆ ಹಾಗೂ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನವನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು.
ಐನಾಪುರ, ಮದಭಾವಿ, ಹೊನ್ನುಟಗಿ, ಅಂಕಲಗಿ ಹಾಗೂ ಆಹೇರಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು, ಕಚೇರಿಗಳ ಕಾರ್ಯನಿರ್ವಹಣೆ, ಸಿಬ್ಬಂದಿಯ ಹಾಜರಾತಿ ಮತ್ತು ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. ಪಂಚಾಯಿತಿ ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಸಮಯಪಾಲನೆ ಮತ್ತು ಕರ್ತವ್ಯನಿಷ್ಠೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಯೋಜನೆಗಳ ಮಾಹಿತಿ ತಲುಪಿಸಲು ಸೂಚನೆ
ಹೊನ್ನುಟಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಇಒ ರಿಷಿ ಆನಂದ ಅವರು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರ್ಹ ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ದೊರೆಯುತ್ತಿದೆಯೇ ಎಂಬುದನ್ನು ವಿಚಾರಿಸಿದರು.
ವಿಶೇಷವಾಗಿ ವಿಬಿ–ಜಿ ರಾಮ್–ಜಿ (ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್) ಯೋಜನೆಯಡಿ ಗ್ರಾಮೀಣ ಜನರಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ವ್ಯಾಪಕವಾಗಿ ಮಾಹಿತಿ ನೀಡಬೇಕು. ಹೆಚ್ಚಿನ ಸಂಖ್ಯೆಯ ಕೂಲಿ ಕಾರ್ಮಿಕರನ್ನು ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಮತೀರ್ಥ ಕೆರೆ ಕಾಮಗಾರಿ ಪರಿಶೀಲನೆ
ರಾಮತೀರ್ಥ ಕೆರೆಯ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿದ ಸಿಇಒ ಅವರು ಕಾಮಗಾರಿಯ ಪ್ರಗತಿ, ಗುಣಮಟ್ಟ ಹಾಗೂ ಕಾರ್ಮಿಕರ ಭಾಗವಹಿಸುವಿಕೆಯ ಕುರಿತು ಮಾಹಿತಿ ಪಡೆದರು.
ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಅರ್ಹ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ ಸೇರಿದಂತೆ ಗ್ರಾಮೀಣ ಕುಟುಂಬಗಳಿಗೆ ದೀರ್ಘಕಾಲಿಕವಾಗಿ ಅನುಕೂಲವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಕಾಮಗಾರಿ ಸ್ಥಳದಲ್ಲಿಯೇ ಕೂಲಿ ಕಾರ್ಮಿಕರ ಹಾಜರಾತಿ ದಾಖಲಿಸುವ ಎನ್ಎಂಎಂಎಸ್ ಪ್ರಕ್ರಿಯೆಯನ್ನು ಸಿಇಒ ರಿಷಿ ಆನಂದ ಅವರು ಖುದ್ದಾಗಿ ವೀಕ್ಷಿಸಿದರು. ಕಾರ್ಮಿಕರು ನಿಜವಾಗಿ ಕಾಮಗಾರಿ ಸ್ಥಳದಲ್ಲಿ ಹಾಜರಿರುವುದನ್ನು ಖಚಿತಪಡಿಸಿಕೊಂಡು, ಹಾಜರಾತಿ ಹಾಗೂ ಸೃಜನೆಯಾಗುವ ಮಾನವ ದಿನಗಳ ದಾಖಲೆಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಂಕಲಗಿ ಹಾಗೂ ಆಹೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಗಳನ್ನೂ ಅವರು ಪರಿಶೀಲಿಸಿದರು. ಕಾಮಗಾರಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೇ ಗುಣಮಟ್ಟವನ್ನು ಮುಂದುವರಿಸಬೇಕು. ಜೊತೆಗೆ ಹೆಚ್ಚಿನ ಸಂಖ್ಯೆಯ ಕೂಲಿ ಕಾರ್ಮಿಕರನ್ನು ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉದ್ಯೋಗ ಸೃಜನೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
ಸರ್ಕಾರದ ಯೋಜನೆಗಳು ಕೇವಲ ದಾಖಲೆಗಳಲ್ಲಿ ಉಳಿಯದೆ, ಅವುಗಳ ನೈಜ ಪ್ರಯೋಜನ ಅರ್ಹ ಗ್ರಾಮೀಣ ಕುಟುಂಬಗಳಿಗೆ ನೇರವಾಗಿ ತಲುಪಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ರಿಷಿ ಆನಂದ ಅವರು ಹೇಳಿದರು.
ಅಧಿಕಾರಿಗಳು ಕಚೇರಿಯಲ್ಲಷ್ಟೇ ಸೀಮಿತವಾಗದೆ ಕ್ಷೇತ್ರಕ್ಕೆ ತೆರಳಿ ಕಾಮಗಾರಿಗಳ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ಕಾಮಗಾರಿಗಳ ಗುಣಮಟ್ಟ, ಕಾರ್ಮಿಕರ ಹಾಜರಾತಿ, ಉದ್ಯೋಗ ಸೃಜನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande