
ಬೆಂಗಳೂರು, 19 ಆಗಸ್ಟ್ (ಹಿ.ಸ.):
ಆ್ಯಂಕರ್:
ಬೆಂಗಳೂರನ್ನು ‘ಟೋಲ್ ಸಿಟಿ’ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಎಕ್ಸನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸೈಟ್, ಮನೆ, ಅಪಾರ್ಟ್‌ಮೆಂಟ್ ಹೊಂದಿರುವವರು ಹಾಗೂ ವಾಹನ ಖರೀದಿಸುವವರು ಈಗಾಗಲೇ ವಿವಿಧ ತೆರಿಗೆಗಳನ್ನು ಪಾವತಿಸುತ್ತಿದ್ದಾರೆ. ಇದರ ನಡುವೆಯೇ ಜನರ ಮೇಲೆ ಮತ್ತಷ್ಟು ಸುಂಕದ ಹೊರೆ ಹಾಕಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ನೈಸ್ ರಸ್ತೆಯಲ್ಲಿ ವಿಪರೀತ ಟೋಲ್ ದರ ವಿಧಿಸಲಾಗುತ್ತಿದೆ. ಮತ್ತೊಂದೆಡೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಿಸಿ ಅಲ್ಲಿಯೂ ಟೋಲ್ ವಸೂಲಿ ಮಾಡುವ ಯೋಜನೆ ರೂಪಿಸಲಾಗಿದೆ. ಇದೀಗ ₹2,283 ಕೋಟಿ ವೆಚ್ಚದಲ್ಲಿ ರಾಗಿಗುಡ್ಡ-ಕನಕಪುರ ರಸ್ತೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಿ ಅದಕ್ಕೂ ಟೋಲ್ ವಿಧಿಸುವ ಪ್ರಸ್ತಾವನೆ ಇದೆ ಎಂದು ಅಶೋಕ ಹೇಳಿದ್ದಾರೆ.
ನಗರದೊಳಗಿನ ಫ್ಲೈಓವರ್, ಸುರಂಗ ರಸ್ತೆ ಹಾಗೂ ವರ್ತುಲ ರಸ್ತೆಗಳಿಗೆ ಟೋಲ್ ವಿಧಿಸುವುದು ಯಾವ ರೀತಿಯ ಆಡಳಿತ ಎಂದು ಪ್ರಶ್ನಿಸಿರುವ ಅವರು, ವಾಹನ ಖರೀದಿಸುವಾಗ ರಸ್ತೆ ತೆರಿಗೆ ಹಾಗೂ ಇತರ ತೆರಿಗೆಗಳನ್ನು ಪಾವತಿಸಿದ ನಂತರವೂ ಪ್ರತಿಯೊಂದು ಮೂಲಸೌಕರ್ಯಕ್ಕೂ ಪ್ರತ್ಯೇಕ ಟೋಲ್ ವಿಧಿಸುವುದು ಜನರ ಮೇಲೆ ಹೆಚ್ಚುವರಿ ಹೊರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಿಗೆ ಈ ‘ಟೋಲ್ ರಾಜ್’ ನಿಲ್ಲಿಸುವಂತೆ ಆಗ್ರಹಿಸಿರುವ ಅಶೋಕ, ನಗರದೊಳಗೆ ನಿರ್ಮಿಸುವ ರಸ್ತೆಗಳು ಸಾರ್ವಜನಿಕ ಸೇವೆಗಾಗಿ ಇರಬೇಕೇ ಹೊರತು ಜನರಿಂದ ಹಣ ವಸೂಲಿ ಮಾಡುವುದಕ್ಕಾಗಿ ಅಲ್ಲ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ನೈಸ್ ರಸ್ತೆಯಿಂದ ಹಿಡಿದು ಪ್ರಸ್ತಾವಿತ ಸುರಂಗ ರಸ್ತೆ ಹಾಗೂ ಎಲಿವೇಟೆಡ್ ಕಾರಿಡಾರ್‌ಗಳವರೆಗೆ ನಗರದೊಳಗಿನ ಟೋಲ್ ವ್ಯವಸ್ಥೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಜನವಿರೋಧಿ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.