
ಬಳ್ಳಾರಿ, 19 ಆಗಸ್ಟ್ (ಹಿ.ಸ.)
ಆ್ಯಂಕರ್ : ನಗರದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಂಟಿ ಸಹಯೋಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದ್ದು, ಕೆಲಸದಲ್ಲಿ ತೊಡಗಿದ್ದ ಇಬ್ಬರು ಬಾಲ/ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.
ದೇಶವ್ಯಾಪಿ ನಡೆಯುತ್ತಿರುವ ‘ಪ್ಯಾನ್-ಇಂಡಿಯಾ ರಕ್ಷಣಾ ಮತ್ತು ಪುನರ್ವಸತಿ ಅಭಿಯಾನ’ದ ಅಂಗವಾಗಿ, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿದ ನಂತರ ಮಂಗಳವಾರ ನಗರದ ವಿವಿಧೆಡೆ ದಾಳಿ ನಡೆಸಲಾಯಿತು.
ಟಾಸ್ಕ್ಫೋರ್ಸ್ ತಂಡವು ಬಳ್ಳಾರಿ ನಗರದ ಎಂ.ಜಿ. ಹತ್ತಿರದ ಪಟೇಲ್ ನಗರ, ಅನಂತಪುರ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿರುವ ವಾಣಿಜ್ಯ ಮಳಿಗೆ ಹಾಗೂ ಉದ್ದಿಮೆಗಳ ಮೇಲೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಮಕ್ಕಳನ್ನು ಗುರುತಿಸಿ ರಕ್ಷಿಸಲಾಯಿತು. ಸ್ಥಳದಲ್ಲೇ ಮಕ್ಕಳಿಂದ ಅಗತ್ಯ ಹೇಳಿಕೆಗಳನ್ನು ಪಡೆದು, ಮುಂದಿನ ರಕ್ಷಣೆ ಮತ್ತು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಉದ್ದಿಮೆ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್ಗಳನ್ನು ವಿತರಿಸುವ ಮೂಲಕ ಬಾಲಕಾರ್ಮಿಕ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ವಿಶೇಷ ಕಾರ್ಯಾಚರಣೆಯಲ್ಲಿ ಕಾರ್ಮಿಕ ನಿರೀಕ್ಷಕರಾದ ಪರಶುರಾಮ್ (2ನೇ ವೃತ್ತ) ಹಾಗೂ ರಮೇಶ್ (1ನೇ ವೃತ್ತ), ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಆರೋಗ್ಯ ಇಲಾಖೆಯ ಮುಷ್ತಾಕ್ ಅಹಮದ್ ಹಾಗೂ ಗೋವಿಂದಪ್ಪ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಸಿ.ಆರ್.ಪಿ ಮನ್ಸೂರ್ ಅಹಮದ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ನಿಲೋಫಿಯಾ, ಮಕ್ಕಳ ಸಹಾಯವಾಣಿಯ ಕಿರಣ್ ಮತ್ತು ಆನಂದ್, ರೀಚ್ ಸಂಸ್ಥೆಯ ಸಂಯೋಜಕಿ ಬಸಮ್ಮ, ಪ್ಯಾರಾ ಲೀಗಲ್ ಸ್ವಯಂಸೇವಕಿ ಲಕ್ಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್