
ಕೋಲಾರ, ಆಗಸ್ಟ್ ೧೮ (ಹಿ.ಸ.)
ಆ್ಯಂಕರ್: ಯುವಕರಿಗೆ ಓದಿನ ಜೊತೆಗೆ ಮನರಂಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿವೆ. ಹಿಂದಿನ ಕಾಲದ ಕಲೆ, ಸಂಸ್ಕೃತಿಯನ್ನು ಮೆಲುಕು ಹಾಕಿ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಕಾಲೇಜು ಆವರಣದಲ್ಲಿ ‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಕೊತ್ತೂರು ಮಂಜುನಾಥ್ ಅವರು ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ೧೦೩ ಕೋಟಿ ಅನುದಾನ ನೀಡಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಕಾಲೇಜಿನಲ್ಲಿ ಶಾಸಕರ ಅನುದಾನದಿಂದ ೭೫ ಲಕ್ಷ ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಸಿಎಸ್ಆರ್ ಅನುದಾನದ ಮೂಲಕ ಸಭಾಂಗಣದಲ್ಲಿ ಸೀಟ್ ವ್ಯವಸ್ಥೆ ಮಾಡಲಾಗಿದೆ. ಶಾಸಕರ ಸಂಬಳದ ಹಣವನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿದ್ದು, ತಮ್ಮ ವೈಯಕ್ತಿಕ ಬಳಕೆಗೆ ಬಳಸುವುದಿಲ್ಲ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಅಡಗಿರುತ್ತದೆ. ಅವರಿಗೆ ಸೂಕ್ತ ವೇದಿಕೆ ದೊರೆತಾಗ ಮಾತ್ರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಪ್ರತಿ ಶುಕ್ರವಾರ ಕೋಲಾರಮ್ಮ ದೇವಾಲಯದ ಬಳಿ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮ ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ಮಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು..
ಕಾಲೇಜಿನ ಪ್ರಾಂಶುಪಾಲ ಪರಶುರಾಮ್ ನಗರಸಭೆ ಮಾಜಿ ಸದಸ್ಯರಾದ ಸೈಯದ್ ಆಫ್ಸರ್, ಅಮರನಾಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್