ಸಮವಸ್ತ್ರ ಕೇವಲ ಅಧಿಕಾರದ ಸಂಕೇತವಲ್ಲ; ಭದ್ರತೆ, ಧೈರ್ಯ ಮತ್ತು ಸ್ನೇಹದ ಪ್ರತೀಕ
ಬಾಗಲಕೋಟೆ, 18 ಆಗಸ್ಟ್ (ಹಿ.ಸ.) ಆ್ಯಂಕರ್ : ಸಮವಸ್ತ್ರ ಎಂದರೆ ಕೇವಲ ಅಧಿಕಾರದ ಸಂಕೇತವಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಭದ್ರತೆ, ಧೈರ್ಯ ಹಾಗೂ ಸ್ನೇಹದ ಭರವಸೆ ನೀಡುವ ಪವಿತ್ರ ಹೊಣೆಗಾರಿಕೆಯ ಪ್ರತೀಕವಾಗಿದೆ. ಈ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯ ಸ
ಪೊಲೀಸರು


ಬಾಗಲಕೋಟೆ, 18 ಆಗಸ್ಟ್ (ಹಿ.ಸ.)

ಆ್ಯಂಕರ್ : ಸಮವಸ್ತ್ರ ಎಂದರೆ ಕೇವಲ ಅಧಿಕಾರದ ಸಂಕೇತವಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಭದ್ರತೆ, ಧೈರ್ಯ ಹಾಗೂ ಸ್ನೇಹದ ಭರವಸೆ ನೀಡುವ ಪವಿತ್ರ ಹೊಣೆಗಾರಿಕೆಯ ಪ್ರತೀಕವಾಗಿದೆ. ಈ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯ ಸಿಬ್ಬಂದಿ ಜನಸ್ನೇಹಿ ಸೇವೆಗೆ ಆದ್ಯತೆ ನೀಡುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪೊಲೀಸ್ ಠಾಣೆ ಎಂದರೆ ಕೇವಲ ದೂರು ಸ್ವೀಕರಿಸುವ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡುವ ಸ್ಥಳವಲ್ಲ; ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಧೈರ್ಯ ತುಂಬುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸಲು ನೆರವಾಗುವ ಸ್ಥಳವಾಗಬೇಕು ಎಂಬ ನಿಟ್ಟಿನಲ್ಲಿ ಬೀಳಗಿ ಠಾಣೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಠಾಣೆಗೆ ಆಗಮಿಸುವ ಪ್ರತಿಯೊಬ್ಬ ನಾಗರಿಕರನ್ನು ಗೌರವದಿಂದ ಕಾಣುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಅಗತ್ಯ ಮಾರ್ಗದರ್ಶನ ನೀಡುವುದು ಹಾಗೂ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ಮೂಲಕ ಪೊಲೀಸರು ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾರೆ.

ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ನಂಬಿಕೆ ಹೆಚ್ಚಿಸುವ ಇಂತಹ ಜನಸ್ನೇಹಿ ಕಾರ್ಯವೈಖರಿ ಗಮನ ಸೆಳೆಯುತ್ತಿದೆ.

ಈ ಕುರಿತು ಮಾತನಾಡಿದ ಪೊಲೀಸ್ ಪೇದೆ ಶರಣಪ್ಪ ಸವಡಿ, “ಸಮವಸ್ತ್ರ ನಮಗೆ ಅಧಿಕಾರ ನೀಡುವುದರ ಜೊತೆಗೆ ದೊಡ್ಡ ಜವಾಬ್ದಾರಿಯನ್ನೂ ನೀಡುತ್ತದೆ. ಜನರಲ್ಲಿ ಭಯ ಮೂಡಿಸುವುದಕ್ಕಿಂತ ಅವರಲ್ಲಿ ಭದ್ರತೆ ಮತ್ತು ಧೈರ್ಯದ ಭಾವನೆ ಮೂಡಿಸುವುದು ನಮ್ಮ ಕರ್ತವ್ಯ. ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವಿನ ಸಂಬಂಧ ಪ್ರೀತಿ, ಗೌರವ ಹಾಗೂ ನಂಬಿಕೆಯ ಮೇಲೆ ನಿರ್ಮಾಣವಾಗಬೇಕು” ಎಂದು ಹೇಳಿದರು.

ಪೊಲೀಸ್ ಠಾಣೆಯ ಸಿಬ್ಬಂದಿಯ ಇಂತಹ ಮಾನವೀಯ ನಡೆ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲು ಸಹಕಾರಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಜನರೊಂದಿಗೆ ಆತ್ಮೀಯವಾಗಿ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೀಳಗಿ ಪೊಲೀಸ್ ಠಾಣೆ ಜನಸ್ನೇಹಿ ಪೊಲೀಸ್ ಸೇವೆಯ ಮಾದರಿಯಾಗಿ ಗುರುತಿಸಿಕೊಳ್ಳುತ್ತಿದೆ.

ಸಾರ್ವಜನಿಕರ ಸುರಕ್ಷತೆ, ಕಾನೂನು ಪಾಲನೆ ಮತ್ತು ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಕಾರ್ಯದೊಂದಿಗೆ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುತ್ತಿರುವ ಬೀಳಗಿ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande