



ಬಳ್ಳಾರಿ, 18 ಆಗಸ್ಟ್ (ಹಿ.ಸ.)
ಆ್ಯಂಕರ್ : ಮಹಿಳೆಯರಿಗೆ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು `ಟಚ್ ಫಾರ್ ಲೈಫ್' ಫೌಂಡೇಶನ್ನ ನಿರ್ದೇಶಕಿ ನಾರಾ ವೈಜಯಂತಿ ರೆಡ್ಡಿ ಅವರು ತಿಳಿಸಿದ್ದಾರೆ.
`ಟಚ್ ಫಾರ್ ಲೈಫ್' ಫೌಂಡೇಶನ್ ಏರ್ಪಡಿಸಿದ್ದ `ಕಾಂತಿಯ ಹೊಸ ಕ್ರಾಂತಿ' ಶೀರ್ಷಿಕೆಯ ಒಂದು ದಿನದ ಪ್ರಸಾದನ (ಮೇಕಪ್) ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭೆ ಇರುತ್ತದೆ. ಆದರೆ, ಸೂಕ್ತವಾದ ವೇದಿಕೆ, ಅವಕಾಶಗಳು ಮತ್ತು ಪ್ರೋತ್ಸಾಹಗಳು ಸಿಗದೇ ಅನೇಕರು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಆಗಿರುವುದಿಲ್ಲ. ಈಗ, ಪ್ರಸಾದನ (ಮೇಕಪ್)ನಲ್ಲಿ ಅವರ ಪ್ರತಿಭೆಯನ್ನು ಪ್ರಕಟಿಸಲು ಸೂಕ್ತವಾದ ಅವಕಾಶ - ಪ್ರೋತ್ಸಾಹಗಳನ್ನು ಸೃಷ್ಟಿಸಿಕೊಡುವ ಪ್ರಯತ್ನ `ಟಚ್ ಫಾರ್ ಲೈಫ್' ಮೂಲಕ ನಡೆದಿದೆ ಎಂದರು.
ನಿತ್ಯದ ಜಂಜಾಟದ ಬದುಕಿನಲ್ಲಿ ಮಹಿಳೆಯರು ಕುಟುಂಬ, ಮಕ್ಕಳು - ಪತಿಗಾಗಿ, ಸ್ವಂತದ ಆರೋಗ್ಯ, ಕುಟುಂಬದ ಸದಸ್ಯರು, ಅತ್ತೆ - ಮಾವ, ಹಿರಿಯರು ಹೀಗೇ ಅನೇಕರನ್ನು ನೋಡುತ್ತಲೇ ವೈಯಕ್ತಿಕ ಜೀವನವನ್ನು ಮರೆಯುತ್ತಾರೆ. ಅಂಥಹವರಿಗೆ ಅವರಲ್ಲಿ ಅಡಗಿರುವ ಸುಪ್ತಪ್ರತಿಭೆಯನ್ನು ಹೊರತರಲು ಪ್ರಸಾದನ (ಮೇಕಪ್) ಸೂಕ್ತವಾದ ವಿಷಯ. ಈ ನಿಟ್ಟಿನಲ್ಲಿ ಆಸಕ್ತ ಮಹಿಳೆಯರಿಗೆ ಅಗತ್ಯವಾದ ತರಬೇತಿಯನ್ನು ನೀಡಿ, ಅವರಲ್ಲಿರುವ ಪ್ರಸಾದನ ಕಲೆಯನ್ನು - ಕೌಶಲ್ಯವನ್ನು ಪ್ರಕಟಿಸುವಂತೆ ತಿಳಿಸಲಾಗುತ್ತದೆ ಎಂದರು.
ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು, ಗೃಹಿಣಿಯರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಕಲಿಕಾರ್ಥಿಗಳಿಗೆ ನಾರಾ ವೈಜಯಂತಿ ರೆಡ್ಡಿ ಅವರು ಪ್ರಮಾಣಪತ್ರ ಹಾಗೂ ಉಚಿತವಾಗಿ ಮೇಕಪ್ ಕಿಟ್ ನೀಡಿ, ಅಭಿನಂದಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ. ರಾಜೇಶ್ವರಿ, ಪದ್ಮಾ, ಮಂಜುಳಾ, ಚಂಪಾ ಚವ್ಹಾಣ್, ಯಶೋದಾ, ಶಮೀಮ್ ಜಕ್ಲಿ, ಕವಿತಾ, ಜ್ಯೋತಿ, ನಸೀಮಾ, ಸಲ್ಮಾ ಎಸ್.ಕೆ, ಕೆ.ಎಂ. ಅಭಿನಯ, ಚಾನಾಳ್ ಲತಾ, ಶಮೀಮ್ ಜೊಹರಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್