ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಬೇಕು: ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, 18 ಆಗಸ್ಟ್ (ಹಿ.ಸ.): ಆ್ಯಂಕರ್:ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ದೇಶವನ್ನು ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಸಾಧ್ಯ. ಕರ್ನಾಟಕದಲ್ಲಿರುವ ಪ್ರತಿಭಾ ಸಂಪತ್ತು ಅಸಾಮಾನ್ಯವಾಗಿದ್ದು, ಬೆಂಗಳೂರು ದೇಶದ ಅಭಿವೃದ್ಧಿಗೆ ಪ್ರಮುಖ ಶಕ್ತಿಕೇಂದ್ರವಾಗಿದೆ ಎಂದು ಮುಖ್ಯಮಂತ
ಉಪ ಸಭಾಧ್ಯಕ್ಷರನ್ನು ಅಭಿನಂದಿಸಿದ ಮುಖ್ಯಮಂತ್ರಿ


ಬೆಂಗಳೂರು, 18 ಆಗಸ್ಟ್ (ಹಿ.ಸ.):

ಆ್ಯಂಕರ್:ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ದೇಶವನ್ನು ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಸಾಧ್ಯ. ಕರ್ನಾಟಕದಲ್ಲಿರುವ ಪ್ರತಿಭಾ ಸಂಪತ್ತು ಅಸಾಮಾನ್ಯವಾಗಿದ್ದು, ಬೆಂಗಳೂರು ದೇಶದ ಅಭಿವೃದ್ಧಿಗೆ ಪ್ರಮುಖ ಶಕ್ತಿಕೇಂದ್ರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಆಯ್ಕೆ ಬಳಿಕ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ. ರಾಜಕೀಯದಲ್ಲಿ ಅಧಿಕಾರದ ದುರುಪಯೋಗವಾಗಬಾರದು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ರಾಜ್ಯದ ಹಿತಾಸಕ್ತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ಟೀಕೆ, ಸಲಹೆ ಮತ್ತು ಮಾರ್ಗದರ್ಶನಗಳು ಸರ್ಕಾರಕ್ಕೆ ಅಗತ್ಯ ಎಂದರು.

ಬಿಡದಿ ಟೌನ್‌ಶಿಪ್‌ಗೆ ಬೆಂಬಲ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ರೂಪಿಸಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಯ ಆಲೋಚನೆ ತಪ್ಪಲ್ಲ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಉತ್ತಮ ಆಲೋಚನೆಗಳನ್ನು ಮುಂದುವರಿಸುವುದಾಗಿ ಶಿವಕುಮಾರ್ ಹೇಳಿದರು. ಯೋಜನೆಗಳಲ್ಲಿ ಲೋಪದೋಷಗಳಿದ್ದರೆ ಅವುಗಳನ್ನು ಸರಿಪಡಿಸೋಣ ಎಂದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ನಗರಕ್ಕೆ ವಸತಿ, ನೀರು ಹಾಗೂ ಮೂಲಸೌಕರ್ಯ ಒದಗಿಸುವುದು ದೊಡ್ಡ ಸವಾಲಾಗಿದೆ. ಬೆಂಗಳೂರಿನ ಸಮಸ್ಯೆಗಳಿಗೆ ಪಕ್ಷಭೇದ ಮರೆತು ಪರಿಹಾರ ಕಂಡುಕೊಳ್ಳಬೇಕು. ನಗರದಲ್ಲಿರುವ ಪ್ರತಿಭಾ ಸಂಪತ್ತಿಗೆ ಸೂಕ್ತ ಮಾನ್ಯತೆ ನೀಡಿ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಬೇಕಿದೆ ಎಂದು ಹೇಳಿದರು.

ಬೆಂಗಳೂರಿಗೆ ನೀರು ಒದಗಿಸುವುದು ಆದ್ಯತೆ: ಬೆಂಗಳೂರಿನ ನೀರಿನ ಸಮಸ್ಯೆ ಪರಿಹರಿಸಲು ಹೆಸರಘಟ್ಟ, ಹೊಸಕೋಟೆ, ತಿಪ್ಪಗೊಂಡನಹಳ್ಳಿ ಸೇರಿದಂತೆ ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಕಾವೇರಿ ವಿಚಾರದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಕರ್ನಾಟಕದ ರೈತರ ಹಿತ ಕಾಪಾಡಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುವುದು. ನಗರ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು ಮತ್ತು ಕೃಷಿಯ ಪರಿಚಯ ಮಾಡಿಸಲು ಕೃಷಿ ವಿಶ್ವವಿದ್ಯಾಲಯದ ಮೂಲಕ ಮೂರು ದಿನಗಳ ಪ್ರವಾಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದ 350 ಕಿ.ಮೀ. ಉದ್ದದ ಕರಾವಳಿಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ರೈತರು, ನೀರಾವರಿ, ನೀರು ಮತ್ತು ನಗರಾಭಿವೃದ್ಧಿ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ರಚನಾತ್ಮಕ ಪರಿಹಾರ ಕಂಡುಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’: ರಾಜಕೀಯ ಜೀವನದಲ್ಲಿ ಟೀಕೆಗಳು ಸಹಜ. ಆದರೆ ಟೀಕೆಗಳು ಕಾಲಕ್ರಮೇಣ ಮರೆಯಾಗುತ್ತವೆ; ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ. ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ. ಹೆಚ್ಚು ಸ್ನೇಹಿತರನ್ನು ಗಳಿಸುವುದು ನನ್ನ ಉದ್ದೇಶ ಎಂದು ಶಿವಕುಮಾರ್ ಹೇಳಿದರು.

ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ಜಗತ್ತು ಕರ್ನಾಟಕ ಮತ್ತು ಬೆಂಗಳೂರನ್ನು ಗಮನಿಸುತ್ತಿದ್ದು, ಈ ಅವಕಾಶವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande