ಕೋಲಾರ ಜಿಲ್ಲಾ ಕರವೇ ಅಧ್ಯಕ್ಷರಾಗಿ ಎಂ.ಎಸ್.ಶ್ರೀನಿವಾಸ್ ನೇಮಕ
ಕೋಲಾರ ಜಿಲ್ಲಾ ಕರವೇ ಅಧ್ಯಕ್ಷರಾಗಿ ಎಂ.ಎಸ್.ಶ್ರೀನಿವಾಸ್ ನೇಮಕ
ಕೋಲಾರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿ ಮಾಲೂರಿನ ಎಂ.ಎಸ್. ಶ್ರೀನಿವಾಸ್ ರವರನ್ನು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇಮಕ ಮಾಡಿ ಘೋಷಣೆ ಮಾಡಿದರು.


ಕೋಲಾರ,18 ಆಗಸ್ಟ್ (ಹಿ.ಸ.):

ಆ್ಯಂಕರ್ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರ ಆದೇಶದಂತೆ ಕೋಲಾರ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಮಾಲೂರಿನ ಎಂ.ಎಸ್.ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಎಸ್.ಶ್ರೀನಿವಾಸ್ ಅವರನ್ನು ಕೋಲಾರ ಜಿಲ್ಲಾ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.

ಟಿ.ಎ.ನಾರಾಯಣಗೌಡ ಮಾತನಾಡಿ ಕೋಲಾರ ಜಿಲ್ಲೆ ಒಂದು ಕಡೆ ಎಕ್ಕಡ, ಮತ್ತೊಂದು ಕಡೆ ಎನ್ನಡ ಎಂಬ ಪರಿಸ್ಥಿತಿ ಆಗಬಾರದು. ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಕನ್ನಡವನ್ನು ಸಮೃದ್ಧವಾಗಿ ಕಟ್ಟುವ ಕೆಲಸಕ್ಕೆ ಎಲ್ಲರೂ ಸಜ್ಜಾಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಜಾತಿ, ಕನ್ನಡ ಧರ್ಮ, ಕನ್ನಡ ದೇವರು ಎಂಬ ಸಿದ್ಧಾಂತದಡಿ ಕಳೆದ ೨೭ ವರ್ಷಗಳಿಂದ ರಾಜ್ಯದ ಉದ್ದಗಲಕ್ಕೂ ಸಂಘಟನೆಯನ್ನು ಕಟ್ಟಿಕೊಂಡು ಬಂದಿದೆ. ರಾಜಕೀಯ, ಜಾತಿ ಮತ್ತು ಧರ್ಮದ ಭೇದವಿಲ್ಲದೆ ಕನ್ನಡ ಎಂಬ ಮೂರು ಅಕ್ಷರದ ಮಂತ್ರದೊಂದಿಗೆ ಬೀದರ್ ನಿಂದ ಚಾಮರಾಜನಗರದವರೆಗೆ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಲಾಗಿದೆ ಎಂದು ಅವರು ಹೇಳಿದರು.

ಸಂಘಟನೆಯಲ್ಲಿ ವ್ಯಕ್ತಿ ಪ್ರತಿಷ್ಠೆಗೆ ಯಾವುದೇ ಮಹತ್ವವಿಲ್ಲ. ಕರ್ನಾಟಕ, ಕನ್ನಡ ಮತ್ತು ಕನ್ನಡಿಗರಿಗೆ ಮಾತ್ರ ಆದ್ಯತೆ. ವ್ಯಕ್ತಿ ಪೂಜೆ ಅಥವಾ ವ್ಯಕ್ತಿಯನ್ನು ವೈಭವೀಕರಿಸುವುದು ಕರವೇಯ ಉದ್ದೇಶವಲ್ಲ. ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲದ ರಕ್ಷಣೆಯೇ ಸಂಘಟನೆಯ ಪ್ರಮುಖ ಗುರಿಯಾಗಿದೆ. ೧೯೯೯ರಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉದಯವಾದ ಕರ್ನಾಟಕ ರಕ್ಷಣಾ ವೇದಿಕೆ ಇಂದು ರಾಜ್ಯದಾದ್ಯಂತ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ೩೧ ಜಿಲ್ಲೆಗಳಲ್ಲಿಯೂ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಅಧಿಕೃತ ಕಾರ್ಯಕರ್ತರನ್ನು ಹೊಂದಿದೆ ಎಂದು ಅವರು ಹೇಳಿದರು.

ಕೋಲಾರ ಜಿಲ್ಲೆ ಹಾಗೂ ಕೆಜಿಎಫ್ಗಾಗಿ ಕರವೇ ನಡೆಸಿದ ಹೋರಾಟಗಳನ್ನು ಸ್ಮರಿಸಿದ ನಾರಾಯಣಗೌಡ, ಕೋಲಾರ ಜಿಲ್ಲೆಯಲ್ಲಿ ಸಂಘಟನೆಯನ್ನು ಕಟ್ಟಲು ನಾನು ಸಾಕಷ್ಟು ಶ್ರಮಿಸಿದ್ದೇನೆ. ಕೆಜಿಎಫ್ ವಿಚಾರದಲ್ಲಿ ದೊಡ್ಡ ಮಟ್ಟದ ಚಳವಳಿಯನ್ನು ರೂಪಿಸಿದ್ದೇವೆ. ಆ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಕಾರ್ಯಕರ್ತರು ನನ್ನ ಬೆನ್ನೆಲುಬಾಗಿ ನಿಂತು ಹೋರಾಟಕ್ಕೆ ಶಕ್ತಿ ನೀಡಿದ್ದರು. ಆ ಇತಿಹಾಸವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.

ಕೋಲಾರ ಜಿಲ್ಲೆಯಲ್ಲಿ ಇನ್ನು ಮುಂದೆ ಯಾವುದೇ ವ್ಯಕ್ತಿ ಪ್ರತಿಷ್ಠೆಗೆ ಅವಕಾಶ ಇರಬಾರದು. ಸಂಘಟನಾತ್ಮಕ ಚಿಂತನೆ, ನನ್ನ ನಾಡು, ನನ್ನ ನುಡಿ, ನನ್ನ ಭಾಷೆ, ನನ್ನ ಸಂಸ್ಕೃತಿ, ನನ್ನ ನೆಲ, ನನ್ನ ಜಲ ಎಂಬ ನೈಜ ಕಾಳಜಿ ಹಾಗೂ ಕನ್ನಡದ ಮೇಲಿನ ಬದ್ಧತೆಯೊಂದಿಗೆ ಎಲ್ಲರೂ ಕೆಲಸ ಮಾಡಬೇಕು, ಎಂದು ಅವರು ಕರೆ ನೀಡಿದರು. ಈ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧ್ಯಕ್ಷರಿಗೆ ಕೆಲಕಾಲ ವಿರಾಮ ನೀಡಲಾಗಿದ್ದು, ಕೇಂದ್ರ ಸಮಿತಿ ಹಾಗೂ ರಾಜ್ಯ ಸಮಿತಿಯ ಪರವಾಗಿ ಎಂ.ಎಸ್.ಶ್ರೀನಿವಾಸ್ ಅವರನ್ನು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಕೋಲಾರ ಜಿಲ್ಲಾ ಅಧ್ಯಕ್ಷರನ್ನಾಗಿ ಘೋಷಿಸುತ್ತೇನೆ ಎಂದು ಟಿ.ಎ. ನಾರಾಯಣಗೌಡ ಪ್ರಕಟಿಸಿದರು.

ಸಂಘಟನೆಯಲ್ಲಿ ವ್ಯಕ್ತಿ ಮುಖ್ಯವಲ್ಲ, ಸಂಘಟನೆ ಮುಖ್ಯ ಎಂಬ ನಿಲುವಿನೊಂದಿಗೆ ಜಿಲ್ಲಾ ಕಾರ್ಯಕರ್ತರು ಶ್ರೀನಿವಾಸ್ ಅವರೊಂದಿಗೆ ನಿಂತು ನಾಡು ಕಟ್ಟುವ ಕೆಲಸ ಮಾಡಬೇಕು. ಇಂದಿನಿAದ ಶ್ರೀನಿವಾಸ್ ಅವರು ಕೋಲಾರ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಎಲ್ಲಾ ತಾಲೂಕುಗಳ ಮುಖಂಡರು, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸಾಮಾನ್ಯ ಕಾರ್ಯಕರ್ತರು ಒಗ್ಗಟ್ಟಿನಿಂದ ಅವರೊಂದಿಗೆ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande