
ಬಳ್ಳಾರಿ, 18 ಆಗಸ್ಟ್ (ಹಿ.ಸ.)
ಆ್ಯಂಕರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ.ಕಿಸಾನ್) ಯೋಜನೆಯಡಿ ನೋಂದಾಯಿತರಾಗಿರುವ ಜಿಲ್ಲೆಯ ಎಲ್ಲಾ ಅರ್ಹ ರೈತ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2,000 ರಂತೆ ವಾರ್ಷಿಕವಾಗಿ ಒಟ್ಟು ರೂ.6,000 ಮೊತ್ತವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 69,908 ರೈತ ಫಲಾನುಭವಿಗಳಿದ್ದು, ಪ್ರತಿಯೊಬ್ಬರೂ ಬಯೋಮೆಟ್ರಿಕ್ ಅಥವಾ ಮೊಬೈಲ್ ಆಪ್ ಮೂಲಕ ಫೇಸ್ ಅಥೆಂಟಿಕೇಷನ್ (ಮುಖ ಗುರುತಿಸುವಿಕೆ) ಮಾಡಿಸಿ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
*ಇ-ಕೆವೈಸಿ ಮಾಡಿಸಿಕೊಳ್ಳುವ ವಿಧಾನಗಳು:*
ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ (ಗ್ರಾಹಕ ಸೇವಾ ಕೇಂದ್ರಗಳ ಮೂಲಕ), ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ ವಿವರಗಳನ್ನು ನೀಡಿ, ಬಯೋಮೆಟ್ರಿಕ್ ಸಾಧನದ ಮೂಲಕ ಹೆಬ್ಬೆರಳು ಅಥವಾ ಕಣ್ಣಿನ ಐರಿಸ್ ಸ್ಕಾö್ಯನ್ ಮಾಡಿ ಇ-ಕೆವೈಸಿ ಪೂರ್ಣಗೊಳಿಸಬಹುದು.
ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿ (ಮೊಬೈಲ್ ಆಪ್ ಮೂಲಕ) ಗೂಗಲ್ ಪ್ಲೇ ಸ್ಟೋರ್ನಿಂದ ಪಿಎಂ-ಕಿಸಾನ್ ಆಪ್ ಮತ್ತು ಆಧಾರ್ ಫೇಸ್ ಆರ್ಡಿ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು.
ಆಪ್ ನಲ್ಲಿ ವಿವರಗಳನ್ನು ದಾಖಲಿಸಿ, ಮೊಬೈಲ್ ಕ್ಯಾಮೆರಾ ಮೂಲಕ ಮುಖವನ್ನು ಸ್ಕಾö್ಯನ್ ಮಾಡುವ ಮೂಲಕ ಸ್ವತಃ ತಾವೇ ಇ-ಕೆವೈಸಿ ಮಾಡಿಕೊಳ್ಳಬಹುದು ಅಥವಾ ಕೃಷಿ ಇಲಾಖೆಯ ವಿ.ಎನ್.ಒ ಗಳು ಹಾಗೂ ಕೃಷಿ ಸಖಿಯರ ನೆರವಿನಿಂದ ಅವರ ಲಾಗಿನ್ ಮೂಲಕವೂ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶವಿದೆ.
*ತಾಲೂಕುವಾರು ಇ-ಕೆವೈಸಿ ಮಾಡಿಸಬೇಕಾದ ಫಲಾನುಭವಿಗಳ ವಿವರ:*
ಬಳ್ಳಾರಿ: 17,724
ಕುರುಗೋಡು: 11,107
ಸಿರುಗುಪ್ಪ: 22,269
ಕಂಪ್ಲಿ: 8,149
ಸಂಡೂರು: 10,659
ಒಟ್ಟು: 69,908
*ಮುಂದಿನ ಕಂತಿನ ಹಣ ಬಿಡುಗಡೆಗೆ ಇ-ಕೆವೈಸಿ ಅನಿವಾರ್ಯ:*
ಇ-ಕೆವೈಸಿ ಮಾಡಿಸದ ರೈತರಿಗೆ ಮುಂಬರುವ 24ನೇ ಕಂತಿನ ಅನುದಾನ ವರ್ಗಾವಣೆಯಾಗುವುದಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ರೈತ ಫಲಾನುಭವಿಗಳು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್