ಗಣಿ ತಿದ್ದುಪಡಿ ಮಸೂದೆ ಹಿಂಪಡೆಯಲು ಕೇಂದ್ರಕ್ಕೆ ಡಿಸಿಎಂ ಪರಮೇಶ್ವರ್ ಪತ್ರ
ಬೆಂಗಳೂರು, 18 ಆಗಸ್ಟ್ (ಹಿ.ಸ.): ಆ್ಯಂಕರ್:2026ರ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿಗೆ
DCM letter


ಬೆಂಗಳೂರು, 18 ಆಗಸ್ಟ್ (ಹಿ.ಸ.):

ಆ್ಯಂಕರ್:2026ರ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಖನಿಜ ಹಕ್ಕುಗಳು ಹಾಗೂ ಖನಿಜ ಸಮೃದ್ಧ ಭೂಮಿಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ನಿರ್ಬಂಧಿಸುವ ಮಸೂದೆಯ ನಿಬಂಧನೆಗಳ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಪಟ್ಟಿಯ 49 ಮತ್ತು 50ನೇ ನಮೂದುಗಳ ಅಡಿಯಲ್ಲಿ ರಾಜ್ಯಗಳ ಶಾಸಕಾಂಗ ಹಾಗೂ ಹಣಕಾಸು ಅಧಿಕಾರಗಳನ್ನು ದೃಢಪಡಿಸಿರುವ ಸುಪ್ರೀಂ ಕೋರ್ಟ್‌ನ 2024ರ ಮಹತ್ವದ ತೀರ್ಪನ್ನು ಪರಮೇಶ್ವರ್ ಉಲ್ಲೇಖಿಸಿದ್ದಾರೆ.

ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಏಕಪಕ್ಷೀಯ ನಿಲುವು ಭಾರತದ ಒಕ್ಕೂಟ ವ್ಯವಸ್ಥೆಗೆ ಗಂಭೀರ ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿರುವ ಅವರು, ಮಸೂದೆ ಕುರಿತು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಖನಿಜ ಹಿತಾಸಕ್ತಿ ಮತ್ತು ರಾಜ್ಯಗಳ ಹಣಕಾಸು ಸ್ವಾಯತ್ತತೆ ಎರಡನ್ನೂ ರಕ್ಷಿಸುವ ಒಕ್ಕೂಟ ಸಹಕಾರದ ತತ್ವವನ್ನು ಎತ್ತಿಹಿಡಿದು, ಎಲ್ಲರ ಒಮ್ಮತದ ಆಧಾರದ ಮೇಲೆ ಸೂಕ್ತ ಚೌಕಟ್ಟನ್ನು ರೂಪಿಸಬೇಕು ಎಂದು ಉಪಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande