ಕೃಷ್ಣ–ವಾದಿರಾಜ ಮಠದಲ್ಲಿ ಸೆ. 4–5ರಂದು ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವ
ವಿಜಯಪುರ, 18 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ನಗರದ ಕೃಷ್ಣ–ವಾದಿರಾಜ ಮಠದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು ಎಂದು ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ತಿಳಿಸಿದರು. ಭಕ್ತರ ಸಮ್ಮುಖದ
ಶ್ರೀಮಠ


ವಿಜಯಪುರ, 18 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ನಗರದ ಕೃಷ್ಣ–ವಾದಿರಾಜ ಮಠದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು ಎಂದು ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ತಿಳಿಸಿದರು.

ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ನೆರವೇರಿಸಲಾಗುವುದು. ಮಹಿಳಾ ಮಂಡಳಿಗಳ ವತಿಯಿಂದ ಅಖಂಡ ಭಜನೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

ಸೆಪ್ಟೆಂಬರ್ 5ರಂದು ಶ್ರೀಕೃಷ್ಣನಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

₹7 ಕೋಟಿ ವೆಚ್ಚದಲ್ಲಿ ನೂತನ ವಿದ್ಯಾರ್ಥಿ ನಿಲಯ

ಶ್ರೀಗಳ ಆದೇಶದ ಮೇರೆಗೆ ಶ್ರೀಮಠದ ಆವರಣದಲ್ಲಿದ್ದ ವಿದ್ಯಾರ್ಥಿ ನಿಲಯದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಆಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಸುಮಾರು ₹7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಭಕ್ತರು ಈಗಾಗಲೇ ದೇಣಿಗೆ ನೀಡುತ್ತಿದ್ದು, ಇನ್ನಷ್ಟು ಭಕ್ತರು ಉದಾರವಾಗಿ ಸಹಕರಿಸುವಂತೆ ಗೋಪಾಲ ನಾಯಕ ಮನವಿ ಮಾಡಿದರು.

ಪ್ರಕಾಶ ಅಕ್ಕಲಕೋಟ ಮಾತನಾಡಿ, ಹಿರಿಯರ ಸ್ಮರಣೆಯನ್ನು ಶಾಶ್ವತಗೊಳಿಸುವ ಉದ್ದೇಶದಿಂದ ನೂತನ ವಿದ್ಯಾರ್ಥಿ ನಿಲಯದಲ್ಲಿ ಒಂದು ಕೊಠಡಿ ನಿರ್ಮಾಣಕ್ಕೆ ₹5 ಲಕ್ಷ ದೇಣಿಗೆ ನೀಡುವ ಭಕ್ತರ ಹೆಸರು ಹಾಗೂ ಭಾವಚಿತ್ರವನ್ನು ಕೊಠಡಿಯಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು. ₹25 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡುವವರ ಹೆಸರುಗಳನ್ನು ನಾಮಫಲಕದಲ್ಲಿ ದಾಖಲಿಸಲಾಗುವುದು ಎಂದು ವಿವರಿಸಿದರು.

ತಂದೆಯ ಸ್ಮರಣೆಯಲ್ಲಿ ಕೊಠಡಿ ನಿರ್ಮಾಣಕ್ಕೆ ದೇಣಿಗೆ

ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯ ವಿ.ಬಿ. ಕುಲಕರ್ಣಿ ಅವರು ತಮ್ಮ ತಂದೆ ಭಗವಂತರಾವ್ ಅವರ ಸ್ಮರಣಾರ್ಥ ₹5 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಸಮಿತಿ ಅಧ್ಯಕ್ಷ ಕಿರಣ ಚುಳಕಿ ಅವರು ಸಹ ತಮ್ಮ ತಂದೆಯ ಸ್ಮರಣೆಯಲ್ಲಿ ಕೊಠಡಿ ನಿರ್ಮಾಣಕ್ಕಾಗಿ ₹5 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಭಕ್ತರ ಸಹಕಾರ ನಿರಂತರವಾಗಿ ದೊರೆಯುತ್ತಿದ್ದು, ನೂತನ ವಿದ್ಯಾರ್ಥಿ ನಿಲಯದ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಮಾಜದ ಎಲ್ಲ ವರ್ಗದ ಭಕ್ತರು ಕೈಜೋಡಿಸಬೇಕು ಎಂದು ಮುಖಂಡರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರಾದ ಡಾ. ಮಲಘಾಣ, ಅಶೋಕರಾವ್, ವಿಕಾಸ ಪದಕಿ, ವಿ.ಸಿ. ಕುಲಕರ್ಣಿ, ಮೋಹನ ಕೌತಾಳ, ಗೋವಿಂದ ಜೋಶಿ, ವ್ಯವಸ್ಥಾಪಕ ಪಂಡಿತ ವಾಸುದೇವ ಆಚಾರ್ಯ, ಪಂಡಿತ ಸಮೀರಾಚಾರ್ಯ, ಭಜನಾ ಮಂಡಳಿ ಪ್ರತಿನಿಧಿಗಳಾದ ಅನಿತಾ ಪದಕಿ, ಲಕ್ಷ್ಮಿ ಕುಲಕರ್ಣಿ, ಗುತ್ತಿಗೆದಾರ ಮೋಹನ ಕುಲಕರ್ಣಿ, ಶ್ರೀವತ್ಸ ಕುಲಕರ್ಣಿ ಸೇರಿದಂತೆ ಶ್ರೀಮಠದ ಸಮಿತಿ ಸದಸ್ಯರು, ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande