
ಬೆಂಗಳೂರು, 18 ಆಗಸ್ಟ್ (ಹಿ.ಸ.):
ಆ್ಯಂಕರ್:
ಕೌಶಲ್ಯ ಎಂದರೆ ಜ್ಞಾನಿಗಳು ಮತ್ತು ಸಾಧಕರ ಸಂಗಮವಾಗಿದ್ದು, ಅದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಯುವಕರ ಕೌಶಲ್ಯದಿಂದ ಕರ್ನಾಟಕ ವಿಶ್ವದಲ್ಲೇ ಹೊಸ ಸಂಶೋಧನೆಯ ತವರೂರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯ ಜತೆಗೆ ಕೌಶಲ್ಯವೂ ಅಗತ್ಯ. ಕೌಶಲ್ಯ ಇದ್ದರೆ ರಾಜಯೋಗ ಇದ್ದಂತೆ. ಕರ್ನಾಟಕ ಕೌಶಲ್ಯದ ತವರೂರು ಎಂದರು.
ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್‌ಗಳಿದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಟಾಟಾ, ಮಹೀಂದ್ರಾ ಸೇರಿದಂತೆ ಹಲವು ದೊಡ್ಡ ಕೈಗಾರಿಕೆಗಳ ಉದ್ಯಮಿಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಇಲ್ಲಿ ಕೌಶಲ್ಯ ಪಡೆದು ವಿಶ್ವದಾದ್ಯಂತ ತಮ್ಮ ಉದ್ಯಮಗಳನ್ನು ವಿಸ್ತರಿಸಿದ್ದಾರೆ. ಯುವಕರು ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದರು ಮತ್ತು ಜಮಶೆಡ್‌ಜಿ ಟಾಟಾ ಅವರ ಚರ್ಚೆಯ ಫಲವಾಗಿ ವಿಜ್ಞಾನ ಶಿಕ್ಷಣಕ್ಕೆ ಉತ್ತೇಜನ ದೊರೆತು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಾಯಿತು. ಈ ಸಂಸ್ಥೆ ಇಂದು ವಿಶ್ವಕ್ಕೆ ಅಪಾರ ಸಂಖ್ಯೆಯ ಪ್ರತಿಭಾವಂತ ವಿಜ್ಞಾನಿಗಳನ್ನು ನೀಡಿದೆ ಎಂದು ಸ್ಮರಿಸಿದರು.
ಪದವಿ ಮತ್ತು ಕೌಶಲ್ಯಕ್ಕೆ ನೇರ ಸಂಬಂಧವಿಲ್ಲ. ಸಾಮಾನ್ಯ ಜ್ಞಾನ ಹಾಗೂ ಕೌಶಲ್ಯವಿದ್ದರೆ ಎಲ್ಲೆಡೆ ಬದುಕು ಕಟ್ಟಿಕೊಳ್ಳಬಹುದು. ರೈತರು, ಕುಶಲಕರ್ಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವವರ ಕೈಚಳಕವೇ ಇದಕ್ಕೆ ಉದಾಹರಣೆ ಎಂದು ಹೇಳಿದರು.
ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ವಿದ್ಯಾರ್ಥಿಗಳು ತಪ್ಪದೇ ಭಾಗವಹಿಸಬೇಕು. ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪಿಸಲಿದೆ ಎಂದು ತಿಳಿಸಿದರು.
ಉದ್ಯೋಗ ಸೇತು ಯೋಜನೆ
ಖಾಸಗಿ ವಲಯದ ಉದ್ಯೋಗಾವಕಾಶಗಳ ಮಾಹಿತಿಯನ್ನು ಯುವಜನರಿಗೆ ತಲುಪಿಸಲು ‘ಯುವಸೇತು’ ಎಂಬ ಹೊಸ ಯೋಜನೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಮೂಲಕ ಖಾಸಗಿ ವಲಯದ ಉದ್ಯೋಗದಾತರು ತಮ್ಮಲ್ಲಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.