
ಕೋಲಾರ,ಆಗಸ್ಟ್ ೧೮ (ಹಿ.ಸ.):
ಆ್ಯಂಕರ್ : ಬಂಗಾರಪೇಟೆ ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಮೀಸಲು ಅರಣ್ಯ, ಸಂರಕ್ಷಿತ ಅರಣ್ಯ ಹಾಗೂ ಗ್ರಾಮ ಅರಣ್ಯಕ್ಕೆ ಸೇರಿದ ಸರ್ಕಾರಿ ಭೂಮಿಯ ಅತಿಕ್ರಮಣವನ್ನು ತಕ್ಷಣ ಗುರುತಿಸಿ, ಕಾನೂನುಬದ್ಧವಾಗಿ ತೆರವುಗೊಳಿಸುವಂತೆ ದ್ರಾವಿಡ ವಿಮೋಚನಾ ಸಂಘದ ಅಧ್ಯಕ್ಷ ಕೆ.ಎಂ. ಅನಂತಕೀರ್ತಿ ಅವರು ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಂಗಾರಪೇಟೆ ಅರಣ್ಯ ವಲಯದಲ್ಲಿ ವ್ಯಾಪಕ ಪ್ರಮಾಣದ ಅರಣ್ಯ ಭೂಮಿ ಅತಿಕ್ರಮಣಕ್ಕೊಳಗಾಗಿರುವ ಕುರಿತು ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜಂಟಿ ಸರ್ವೆ ನಡೆಸಿ, ಅತಿಕ್ರಮಿತ ಪ್ರದೇಶವನ್ನು ದಾಖಲೆಗಳ ಆಧಾರದ ಮೇಲೆ ನಿಖರವಾಗಿ ಗುರುತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೆ ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ವಿ. ಏಡುಕೊಂಡಲು ಅವರ ಅವಧಿಯಲ್ಲಿ ಕಾಮಸಮುದ್ರ ಬ್ಲಾಕ್-೫ರಲ್ಲಿ ಅತಿಕ್ರಮಣಕ್ಕೊಳಗಾಗಿದ್ದ ಸುಮಾರು ೨೫ ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಬಂಗಾರಪೇಟೆ ವಲಯದ ಇತರೆ ಅತಿಕ್ರಮಣ ಪ್ರದೇಶಗಳ ಕುರಿತು ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪಗಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬಂಗಾರಪೇಟೆ ವಲಯದಲ್ಲಿ ಸುಮಾರು ೭,೦೦೦ ಎಕರೆಗೂ ಅಧಿಕ ಅರಣ್ಯ ಭೂಮಿ ಇರುವುದಾಗಿ ತಿಳಿದುಬಂದಿದ್ದು, ಅರಣ್ಯ ಮತ್ತು ಕಂದಾಯ ದಾಖಲೆಗಳನ್ನು ಪರಿಶೀಲಿಸಿ ಅರಣ್ಯದ ಗಡಿ ಹಾಗೂ ವಿಸ್ತೀರ್ಣವನ್ನು ದೃಢಪಡಿಸಬೇಕು. ಅತಿಕ್ರಮಣ ಸಾಬೀತಾದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಅನ್ವಯಿಸುವ ಕಾನೂನುಗಳ ಪ್ರಕಾರ ನೋಟಿಸ್ ನೀಡಿ, ವಿಚಾರಣೆಗೆ ಅವಕಾಶ ಕಲ್ಪಿಸಿದ ಬಳಿಕ ಕಾನೂನುಬದ್ಧವಾಗಿ ತೆರವು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರಣ್ಯ ಭೂಮಿಯ ಗಡಿಗಳನ್ನು ಸ್ಥಳದಲ್ಲಿಯೇ ಸ್ಪಷ್ಟವಾಗಿ ಗುರುತಿಸಿ ಗಡಿ ಕಲ್ಲು ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವುದರ ಜೊತೆಗೆ, ಭವಿಷ್ಯದಲ್ಲಿ ಅತಿಕ್ರಮಣವಾಗದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಕಂಡುಬAದಲ್ಲಿ, ನಿಯಮಾನುಸಾರ ಜವಾಬ್ದಾರಿ ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಅನಂತಕೀರ್ತಿ ಒತ್ತಾಯಿಸಿದ್ದಾರೆ.
ಅರಣ್ಯ ಭೂಮಿ ಸರ್ಕಾರದ ಆಸ್ತಿಯಷ್ಟೇ ಅಲ್ಲ; ಪರಿಸರ ಸಮತೋಲನ, ಜೀವವೈವಿಧ್ಯ ಹಾಗೂ ಮುಂದಿನ ಪೀಳಿಗೆಯ ಹಿತಾಸಕ್ತಿಗೆ ಅಮೂಲ್ಯ ಸಂಪನ್ಮೂಲವಾಗಿದೆ. ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೆ, ದಾಖಲೆಗಳ ಆಧಾರದ ಮೇಲೆ ನಿಷ್ಪಕ್ಷಪಾತವಾಗಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ವಕೀಲ ಪ್ರಜ್ವಲ್, ಸಂತೋಷ್ ಕುಮಾರ್, ಎನ್,ಮೂರ್ತಿಶಿಲ್ಪ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್