
ಬೆಂಗಳೂರು , 17 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರದ ಟೆಕ್ಕಿಯೊಬ್ಬರು ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವಾಗ ಮಾರ್ಗದಲ್ಲಿರುವ ಗುಂಡಿಗಳನ್ನು ಗುರುತಿಸುವ ಈ ಆ್ಯಪ್, ಅವುಗಳ ತೀವ್ರತೆಯನ್ನು ದಾಖಲಿಸುವುದರ ಜೊತೆಗೆ ಗುಂಡಿ ಇರುವ ಸ್ಥಳದ ನಿಖರ ಭೌಗೋಳಿಕ ಮಾಹಿತಿಯನ್ನೂ ನೀಡುತ್ತದೆ. ಇದರಿಂದ ಗುಂಡಿಗಳ ಸ್ಥಳವನ್ನು ನಕ್ಷೆಯಲ್ಲಿ ಗುರುತಿಸಿ, ದುರಸ್ತಿ ಕಾರ್ಯಕ್ಕೆ ಆದ್ಯತೆ ನೀಡಲು ಸಹಕಾರಿಯಾಗಲಿದೆ.
ಟೆಕ್ಕಿ ಅಭಿವೃದ್ಧಿಪಡಿಸಿರುವ ಆ್ಯಪ್‌ನ ವಿಡಿಯೋ ಹಾಗೂ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಂತ್ರಜ್ಞಾನವನ್ನು ಜನೋಪಯೋಗಿ ಉದ್ದೇಶಕ್ಕೆ ಬಳಸಿರುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಇದೇ ವೇಳೆ, ರಸ್ತೆ ಗುಂಡಿಗಳ ಸಮಸ್ಯೆ ಇನ್ನೂ ಬಗೆಹರಿಯದಿರುವುದಕ್ಕೆ ಬಿಬಿಎಂಪಿ ವಿರುದ್ಧವೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ರಸ್ತೆ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಿರುವಾಗ, ನಗರಾಡಳಿತವೂ ಇಂತಹ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ತ್ವರಿತವಾಗಿ ಗುಂಡಿಗಳನ್ನು ಮುಚ್ಚಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
--
ಹಿಂದೂಸ್ತಾನ್ ಸಮಾಚಾರ್ / BHARGAVI G R