
ಕೋಲಾರ, ಆಗಸ್ಟ್೧೭ (ಹಿ.ಸ.):
ಆ್ಯಂಕರ್ : ರಾಜ್ಯ ಸರ್ಕಾರವು ಕಳೆದ ಮೇ ತಿಂಗಳಿನಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಕಾರ್ಮಿಕರ ಇ.ಪಿ.ಎಫ್-೯೫ ಪಿಂಚಣಿಯನ್ನು ರೂ.೧,೦೦೦-೦೦ ದಿಂದ ರೂ.೭,೫೦೦ಕ್ಕೆ ಹೆಚ್ಚಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ಪದಾಧಿಕಾರಿಗಳು, ಇ.ಎಸ್.ಐ ವ್ಯಾಪ್ತಿಯ ಮಿತಿಯನ್ನು ರೂ.೨೧,೦೦೦ ದಿಂದ ರೂ.೪೨,೦೦೦ಕ್ಕೆ ಹೆಚ್ಚಿಸಬೇಕು ಮತ್ತು ಹೆಚ್ಚು ಇ.ಪಿ.ಎಫ್ ವಂತಿಗೆ ಮಿತಿಯನ್ನು ರೂ.೧೫,೦೦೦ ದಿಂದ ರೂ.೩೦,೦೦೦ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಗ್ರಾಚ್ಯುಟಿ ಮಿತಿಯನ್ನು ರೂ.೭,೦೦,೦೦೦ ದಿಂದ ರೂ.೧೮,೦೦,೦೦೦ಕ್ಕೆ ಹೆಚ್ಚಿಸಬೇಕು., ಉಪಧನದ ಮಿತಿಯನ್ನು ೧೫ ದಿನದಿಂದ ಒಂದು ತಿಂಗಳಿಗೆ ಹೆಚ್ಚಿಸಬೇಕು ಮತ್ತು ಅದರ ಮಿತಿಯನ್ನು ೨೦ ಲಕ್ಷದಿಂದ ೪೦ ಲಕ್ಷಕ್ಕೆ ಹೆಚ್ಚಿಸಬೇಕು, ಇ.ಪಿ.ಎಫ್. ಹೆಚ್ಚುವರಿ ಪಿಂಚಣಿಯನ್ನು ಎಲ್ಲಾ ವಿಭಾಗದ ಕಾರ್ಮಿಕರಿಗೂ ಜಾರಿಗೊಳಿಸಬೇಕು.ಅಂಗನವಾಡಿ, ಆಶಾ ಮತ್ತು ಬಿಸಿಯೂಟದ ಕಾರ್ಮಿಕರ ಮಾಸಿಕ ಗೌರವಧನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕಿಂಗ್ ಉದ್ಯಮದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೊಳಿಸಬೇಕು, ಅಂಗನವಾಡಿ, ಆಶಾ ಮತ್ತು ಬಿಸಿಯೂಟದ ಕಾರ್ಮಿಕರನ್ನು ಖಾಯಂ ಗೊಳಿಸಬೇಕು, ರಾಜ್ಯದ ಆರೋಗ್ಯ ಇಲಾಖೆಯ ಒಳ ಮತ್ತು ಹೊರ ಗುತ್ತಿಗೆ ನೌಕರರಿಗೆ ಅವರ ಹುದ್ದೆಗಳ ಮಂಜೂರಾತಿ ಪಡೆದು ಅವರ ಸೇವೆಯ ಆಧಾರದ ಮೇಲೆ ಆ ನೌಕರರನ್ನು ಖಾಯಂ ಮಾಡಬೇಕು, ಸರ್ಕಾರದ ಎಲ್ಲಾ ಇಲಾಖೆಯಲ್ಲಿರುವ ಒಳಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೈಬಿಡಬೇಕು, ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ನಿಲ್ಲಿಸಿ ಅದರ ಬಗ್ಗೆ ತನಿಖೆಯಾಗಬೇಕು.ಭಾರತೀಯ ಮಜ್ದೂರು ಸಂಘ ದೇಶದ ಅತೀ ದೊಡ್ಡ ಮತ್ತು ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಯಾಗಿದ್ದು, ಕಳೆದ ೭೨ ವರ್ಷಗಳಿಂದ ದೇಶದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿದೆ ಎಂದರು.
ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವಾರು ಬಾರಿ ಮನವಿ ನೀಡಿ, ಪ್ರತಿಭಟನೆಯನ್ನು ಕಾರ್ಮಿಕ ಸಂಘಗಳು ಮಾಡಿ ಮನವಿ ನೀಡಿದರೂ ಅಸಮರ್ಪಕ ಹಾಗೂ ತಾತ್ಸರದ ಉತ್ತರ ನೀಡಿ ಕಾರ್ಮಿಕರ ವಿರೋಧಿ ನಿಲುವು ತೆಗೆದುಕೊಂಡಿರುತ್ತೀರಿ ಎಂದು ಖಂಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಇಂದ್ರೇಶ್, ದಕ್ಷಿಣ ಪ್ರಾಂತ್ಯ ತಂಗರಾಜ್, ಕೋಲಾರ ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗಭೂಷಣ್,ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ವಿ.ಶಂಕರರೆಡ್ಡಿ,ಕೋಲಾರ ಜಿಲ್ಲಾ ಉಪಾಧ್ಯಕ್ಷ ಕಿಲಾರಿಪೇಟೆ ಮುನಿವೆಂಕಟಯಾದವ್ ಸೇರಿದಂತೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್