
ಬಳ್ಳಾರಿ, 17 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಷಮುಕ್ತ ಹಾಗೂ ಸಾವಯವ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಬಳ್ಳಾರಿ ನಗರದಲ್ಲಿ ಆಗಸ್ಟ್ 26 ರಿಂದ ಪ್ರತಿ ಬುಧವಾರ ನಗರದ ಗಾಂಧಿಭವನದಲ್ಲಿ ಮಧ್ಯಾಹ್ನ 12 ರಿಂದ ಸಂಜೆ 7 ರವರೆಗೆ `ಸಾವಯವ ಸಂತೆ' ನಡೆಯಲಿದೆ.
ಸಾವಯವ ಕೃಷಿಕರ ಪರವಾಗಿ ಸಾವಯವ ಕೃಷಿಕ ರೈತ ಜಯಚಂದ್ರ ಶರ್ಮ ಅವರು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿ, ಸಾವಯವ ಹಾಗೂ ವಿಷಮುಕ್ತ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದೆ. ಪ್ರಾಯೋಗಿಕವಾಗಿ ಚಾಮರಾಜನಗರದಲ್ಲಿ ಆರಂಭವಾದ ಈ ಪ್ರಯತ್ನವನ್ನು ರಾಜ್ಯಮಟ್ಟದಲ್ಲಿ ಮೊದಲಿಗೆ ಬೆಂಗಳೂರಿನಲ್ಲಿ ನಡೆಸಲಾಯಿತು. ಈಗ, ಜಿಲ್ಲಾಮಟ್ಟದಲ್ಲಿ ಬಳ್ಳಾರಿಯಲ್ಲಿ ಸಾವಯವ ಸಂತೆ ಆರಂಭಿಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಬಿ.ಎಂ. ಈರಪ್ಪಯ್ಯ ಅವರು, ಬಳ್ಳಾರಿ ಜಿಲ್ಲೆಯಲ್ಲಿ ವಿಷಮುಕ್ತ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತರು ಬೆಳೆದ ವಿಷಮುಕ್ತ - ಸಾವಯವ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಹಕರು ಯಾವುದೇ ರೀತಿಯಲ್ಲಿ ಮೋಸ ಹೋಗದಂತೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಜವಾಬ್ದಾರಿಯನ್ನು ರೈತ ಸಂಘ ವಹಿಸಲಿದೆ ಎಂದು ಹೇಳಿದರು.
ಪ್ರತಿ ಬುಧವಾರ ಬಳ್ಳಾರಿಯಲ್ಲಿ ನಡೆಯುವ ಸಾವಯವ ಸಂತೆಯಲ್ಲಿ 280ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳು ಮಾರಾಟ ಆಗುತ್ತವೆ. ವಿಷಮುಕ್ತ ಆಹಾರ ಪದ್ಧತಿಯ ಮೂಲಕ ಪ್ರತಿ ಮನೆಯ ಅಡುಗೆ ಮನೆಯನ್ನು ಬದಲಾಯಿಸುವುದು ನಮ್ಮ ಉದ್ದೇಶವಾಗಿದೆ. ಸಾವಯವ ಹಾಗೂ ವಿಷಮುಕ್ತ ಆಹಾರ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಬೆಳೆಸುವುದರಿಂದ ರೈತರಿಗೆ ನ್ಯಾಯಯುತ ಬೆಲೆ
ದೊರೆಯುವುದರ ಜೊತೆಗೆ ಗ್ರಾಹಕರಿಗೂ ಗುಣಮಟ್ಟದ ಆಹಾರ ಸಿಗಲಿದೆ ಎನ್ನುವ ಆಶಯ ತಮ್ಮದು ಎಂದರು.
ಮೋಹನ್ ಗಾಯಕ್ವಾಡ್, ವಿವೇಕಾನಂದ, ಹುಲಿಕೆರೆ ವಿಶ್ವೇಶ್ವರ ಸಜ್ಜನ್, ಗೋವಿಂದರಾಜುಲು, ಈಶ್ವರರೆಡ್ಡಿ, ಶಿಲ್ಪಾ ಹಾಗೂ ರವಿಕುಮಾರ್ ಸೇರಿದಂತೆ
ಸಾವಯವ ಕೃಷಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್