
ಬಾಗಲಕೋಟೆ, 17 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ನಗರದ ಹೊರವಲಯದ ಮಲ್ಲಾಪುರ ಗ್ರಾಮದ ಶ್ರೀ ಮಲ್ಲಯ್ಯ ದೇವಸ್ಥಾನದಲ್ಲಿ ಬ್ಯಾಳಿ ಬಸಪ್ಪ ಹಾಗೂ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಭಕ್ತಿಭಾವ ಹಾಗೂ ಧಾರ್ಮಿಕ ಸಂಭ್ರಮದ ವಾತಾವರಣದಲ್ಲಿ ನೆರವೇರಿತು.
ಶ್ರಾವಣ ಮಾಸದ ಪವಿತ್ರ ಸೋಮವಾರದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಮಂತ್ರಗಳ ಘೋಷ, ಭಜನೆ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ಯಾಳಿ ಬಸಪ್ಪ ಮತ್ತು ಶ್ರೀ ಗಣೇಶನ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು
ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಧರ್ಮು ಹಾವನೂರು ತಿಳಿಸಿದರು.
ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಹೂವು, ತಳಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಕಂಗೊಳಿಸುತ್ತಿತ್ತು. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವರ ದರ್ಶನ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಧಾರ್ಮಿಕ ವಿಧಿವಿಧಾನಗಳ ಬಳಿಕ ಬ್ಯಾಳಿ ಬಸಪ್ಪ ಹಾಗೂ ಗಣೇಶನಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ದೇವರ ದರ್ಶನ ಪಡೆದು ತಮ್ಮ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಶ್ರಾವಣ ಮಾಸವು ಶಿವನ ಆರಾಧನೆಗೆ ವಿಶೇಷ ಮಹತ್ವ ಹೊಂದಿರುವ ಹಿನ್ನೆಲೆಯಲ್ಲಿ ಮಲ್ಲಾಪುರ ಮಲ್ಲಯ್ಯ ದೇವಸ್ಥಾನದಲ್ಲಿ ಸೋಮವಾರದ ಪೂಜಾ ಕಾರ್ಯಕ್ರಮಗಳು ವಿಶೇಷವಾಗಿ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು, ಧಾರ್ಮಿಕ ಮುಖಂಡರು, ದೇವಸ್ಥಾನದ ಸೇವಾಕರ್ತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೂರ್ತಿ ಪ್ರತಿಷ್ಠಾಪನೆಗೆ ಸಾಕ್ಷಿಯಾದರು. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ಹೊಸ ಮೂರ್ತಿಗಳ ಪ್ರತಿಷ್ಠಾಪನೆಯಿಂದ ದೇವಸ್ಥಾನದ ಧಾರ್ಮಿಕ ಮಹತ್ವ ಮತ್ತಷ್ಟು ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೇವಸ್ಥಾನದ ಪರಂಪರೆಯನ್ನು ಮುಂದುವರಿಸುವ ಉದ್ದೇಶ ಹೊಂದಲಾಗಿದೆ ಎಂದು ದೇವಸ್ಥಾನದ ಸೇವಾಕರ್ತರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande