
ಕೋಲಾರ,ಆಗಸ್ಟ್ ೧೭ (ಹಿ.ಸ):
ಆ್ಯಂಕರ್: ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮದ ಶ್ರೀ ತುಪ್ಪದ ಆಂಜನೇಯ ಸ್ವಾಮಿ ಬೆಟ್ಟಕ್ಕೆ 'ಮನೆಗೊಂದು ಮೆಟ್ಟಿಲು' ನಿರ್ಮಿಸುವ ಕಾರ್ಯಕ್ರಮದ ಗುದ್ದಲಿಪೂಜೆ ಸಮಾರಂಭವು ರಾಜಕೀಯವಾಗಿ ಗಮನ ಸೆಳೆಯಿತು. ಒಂದೇ ವೇದಿಕೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಹಾಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಹಾಗೂ ಜೆಡಿಎಸ್ ಮುಖಂಡ, ಪರಾಜಿತ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಬೆಟ್ಟಕ್ಕೆ ನಿರ್ಮಿಸಲು ಉದ್ದೇಶಿಸಿರುವ ಒಟ್ಟು ೩೧೦ ಮೆಟ್ಟಿಲುಗಳ ಪೈಕಿ ೧೦೧ ಮೆಟ್ಟಿಲುಗಳ ನಿರ್ಮಾಣದ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಘೋಷಿಸಿದರು. ತಮ್ಮ ಅನುದಾನದಲ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಮದ್ದೇರಿ ಗ್ರಾಮದ ಬೆಟ್ಟದಲ್ಲಿರುವ ಶ್ರೀ ತುಪ್ಪದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುವ ದ್ವಾರಬಾಗಿಲನ್ನು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಸಮ್ಮೋಹನ ತಜ್ಞ ರಾಮಚಂದ್ರ ಗುರೂಜಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕೋಮುಲ್ ನಿರ್ದೇಶಕ ಚಂಜಿಮಲೆ ಬಿ. ರಮೇಶ್, ವೇಮಗಲ್-ನರಸಾಪುರ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಪೆರ್ಜೆನಹಳ್ಳಿ ನಾಗೇಶ್, ಸೇರಿದಂತೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್