
ಗದಗ, 17 ಆಗಸ್ಟ್ (ಹಿ.ಸ.)
ಆ್ಯಂಕರ್:- ಜ್ಞಾನ ಜ್ಯೋತಿ ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ವತಿಯಿಂದ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪಂಚಾಕ್ಷರ ಗವಾಯಿಗಳವರ ಕಾಲೇಜಿನ ಆವರಣದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ 86ನೇ ಪುಣ್ಯಸ್ಮರಣೋತ್ಸವ, ಪಂಡಿತ ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ಅಂಗವಾಗಿ ಸಂಗೀತೋತ್ಸವ, ಉಪನ್ಯಾಸ ಮತ್ತು ನುಡಿನಮನ ಕಾರ್ಯಕ್ರಮ ಭಕ್ತಿಭಾವ ಹಾಗೂ ಸಂಗೀತಮಯ ವಾತಾವರಣದಲ್ಲಿ ನಡೆಯಿತು.
ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹಾಗೂ ಗವಾಯಿಗಳವರ ಆದರ್ಶಗಳನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು, ಸಂಗೀತ ಕಲಾವಿದರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಂಗೀತಾಭಿಮಾನಿಗಳು ಭಾಗವಹಿಸಿದ್ದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಸಂಗೀತ ಪಾಠಶಾಲೆಯ ಮುಖ್ಯೋಪಾಧ್ಯಾಯ ಮಂಜಯ್ಯ ಎಸ್. ಹಿರೇಮಠ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪೂಜ್ಯರ ಹೆಸರಿನಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಗವಾಯಿಗಳವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶ ಮತ್ತು ಸಾಧನೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಂಗೀತ ಕಲಾವಿದ ಪಂ. ವೆಂಕಟೇಶಕುಮಾರ ಅಲ್ಕೋಡ ಮಾತನಾಡಿ, ಜ್ಞಾನ ಜ್ಯೋತಿ ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ನಿರಂತರವಾಗಿ ಜ್ಞಾನಜ್ಯೋತಿಯಾಗಿ ಬೆಳಗುತ್ತಾ, ಅಂಧ ಹಾಗೂ ಅನಾಥ ಮಕ್ಕಳ ಸೇವೆ ಸೇರಿದಂತೆ ನಾಡಿನ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು. ಸಂಗೀತ ಮತ್ತು ಸೇವೆಯ ಮೂಲಕ ಸಮಾಜಕ್ಕೆ ಬೆಳಕು ನೀಡಿದ ಗವಾಯಿಗಳವರ ಪರಂಪರೆಯನ್ನು ಮುಂದುವರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಸಂಗೀತ ಉಪನ್ಯಾಸಕ ಅಂಬಾದಾಸ ಎಸ್. ಜಮಾದಾರ ಅವರು ಗವಾಯಿಗಳವರ ಜೀವನ, ಸಂಗೀತ ಸಾಧನೆ, ಶಿಷ್ಯ ಪರಂಪರೆ ಹಾಗೂ ಸಮಾಜಮುಖಿ ಸೇವೆಯ ಕುರಿತು ಉಪನ್ಯಾಸ ನೀಡಿದರು. ಸಂಗೀತ ಕ್ಷೇತ್ರದಲ್ಲಿ ಗದಗದ ವೀರೇಶ್ವರ ಪುಣ್ಯಾಶ್ರಮ ಹೊಂದಿರುವ ವಿಶಿಷ್ಟ ಸ್ಥಾನ ಮತ್ತು ಅದರ ಮೂಲಕ ಸಾವಿರಾರು ಪ್ರತಿಭೆಗಳಿಗೆ ದೊರೆತ ಅವಕಾಶಗಳ ಕುರಿತು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಪಿ.ಎಸ್. ಹಿರೇಮಠ, ತಬಲಾ ಶಿಕ್ಷಕ ರಾವುತಪ್ಪ ಹೂಗಾರ, ಶೇಖಣ್ಣ ರೋಣಿ, ಕುಮಾರಸ್ವಾಮಿ ವೆಂಕಟಾಪುರಮಠ, ಕಳಕಪ್ಪ ಕುರ್ತಕೋಟಿ, ಶಿವಚಲಕುಮಾರ ಸಾಲಿಮಠ ಹಾಗೂ ಕಳಕಪ್ಪ ಮದ್ಲಾಪೂರ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅಂಧ-ಅನಾಥ ಮಕ್ಕಳ ಸೇವೆಗೆ ಸನ್ಮಾನ
ಅಂಧ ಹಾಗೂ ಅನಾಥ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಳಕಪ್ಪ ವೀರಪ್ಪ ಮದ್ಲಾಪೂರ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2026ನೇ ಸಾಲಿನ ರಾಜ್ಯ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗಣ್ಯರು ಶ್ಲಾಘಿಸಿದರು.
ಬಳಿಕ ನಡೆದ ಸಂಗೀತೋತ್ಸವದಲ್ಲಿ ಪುಟ್ಟರಾಜ ವೆಂಕಟಾಪುರಮಠ, ಸಂಕೇಶ್ವರ ಮಸಣಿ, ಸೋಹಿನಿ ವಿ. ಅಲ್ಕೋಡ, ರೇಣುಕಾ ಲಕ್ಕುಡಿ, ಶ್ರೇಯಸ್ ಮಂಡ್ಯ, ಮಲ್ಲು, ಆದರ್ಶ ಜಾಧವ ಹಾಗೂ ರಾಹುಲ ಅಮ್ಮಿನಗಡ ಅವರು ಸಂಗೀತ ಕಾರ್ಯಕ್ರಮ ನೀಡಿ ಸಂಗೀತಾಭಿಮಾನಿಗಳನ್ನು ರಂಜಿಸಿದರು. ವಿವಿಧ ರಾಗಗಳ ಗಾಯನದ ಮೂಲಕ ಕಲಾವಿದರು ಗವಾಯಿಗಳವರ ಸಂಗೀತ ಪರಂಪರೆಗೆ ನುಡಿನಮನ ಸಲ್ಲಿಸಿದರು.
ರಾಮಯ್ಯ ಸಂಬಾಳಮಠ ಪ್ರಾರ್ಥಿಸಿದರು. ಶಿವಚಲಕುಮಾರ ಸಾಲಿಮಠ ಹಾಗೂ ಕಳಕಪ್ಪ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಸ್ವಾಮಿ ವೆಂಕಟಾಪುರಮಠ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP