
ಬಾಗಲಕೋಟೆ, 17 ಆಗಸ್ಟ್ (ಹಿ.ಸ.)
ಆ್ಯಂಕರ್ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಆಡಳಿತ ವೈಫಲ್ಯಗಳನ್ನು ಖಂಡಿಸಿ ಹೋರಾಟ ನಡೆಸುವ ಕುರಿತು ಬಾಗಲಕೋಟೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಆಗಸ್ಟ್ 18ರಿಂದ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಈಶ್ವರ ಅಡಪ್ಪಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು, ಜಿಲ್ಲಾ ಹಾಗೂ ಮಂಡಲ ಮಟ್ಟದ ಪದಾಧಿಕಾರಿಗಳು ಭಾಗವಹಿಸಿ ಹೋರಾಟವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಕುರಿತು ಚರ್ಚಿಸಿದರು.
ಸಭೆಯಲ್ಲಿ ಬೆಳಗಾವಿ ವಿಭಾಗ ಸಹಪ್ರಭಾರಿಗಳಾದ ಬಸವರಾಜ ಯಂಕಂಚಿ ಅವರು ಮುಂಬರುವ ಹೋರಾಟದ ಕುರಿತು ಮಾಹಿತಿ ನೀಡಿದರು. ಹೋರಾಟದ ಉದ್ದೇಶ, ಪಕ್ಷದ ಕಾರ್ಯಕರ್ತರ ಭಾಗವಹಿಸುವಿಕೆ ಹಾಗೂ ಜನಪರ ವಿಚಾರಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಡುವ ಕುರಿತು ಅವರು ವಿವರಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮುರುಗೇಶ್ ನಿರಾಣಿ ಅವರು ಮಾತನಾಡಿ, ಹೋರಾಟವನ್ನು ಯಾವ ರೀತಿಯಲ್ಲಿ ಸಂಘಟಿಸಬೇಕು, ಕಾರ್ಯಕರ್ತರು ಯಾವ ರೀತಿಯಲ್ಲಿ ಭಾಗವಹಿಸಬೇಕು ಹಾಗೂ ಹೋರಾಟದ ಸಂದರ್ಭದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.
ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ ಅವರು ಹೋರಾಟದ ಸ್ವರೂಪ ಮತ್ತು ಮುಂದಿನ ಕಾರ್ಯತಂತ್ರದ ಕುರಿತು ವಿವರಿಸಿದರು. ಸರ್ಕಾರದ ನೀತಿಗಳ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಂಘಟಿತ ಹೋರಾಟ ನಡೆಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸಭೆಯಲ್ಲಿ ಎಂ. ಕೆ. ಪಟ್ಟಣಶೆಟ್ಟಿ ಸೇರಿದಂತೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ವಿವಿಧ ಮಂಡಲಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ, ಜನವಿರೋಧಿ ನೀತಿಗಳು ಹಾಗೂ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು.
ಸರ್ಕಾರದ ವಿರುದ್ಧ ಪಕ್ಷದ ವತಿಯಿಂದ ಕೈಗೊಳ್ಳಬೇಕಾದ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಪದಾಧಿಕಾರಿಗಳು ಹಲವು ಮಹತ್ವದ ಸಲಹೆಗಳನ್ನು ನೀಡಿದರು.
ಸಭೆಯ ಅಂತಿಮ ಹಂತದಲ್ಲಿ ಆಗಸ್ಟ್ 18ರಿಂದ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸುವಂತೆ ಸಂಘಟನೆಯನ್ನು ಸಜ್ಜುಗೊಳಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande