
ನವದೆಹಲಿ, 13 ಆಗಸ್ಟ್ (ಹಿ.ಸ.):
ಆ್ಯಂಕರ್:ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದು, ಅಧಿವೇಶನದ ಅವಧಿಯಲ್ಲಿ ಒಟ್ಟು 12 ಮಸೂದೆಗಳು ಅಂಗೀಕಾರಗೊಂಡಿವೆ. ಆದರೆ ಪ್ರತಿಪಕ್ಷದ ನಿರಂತರ ಪ್ರತಿಭಟನೆ ಮತ್ತು ಅಡ್ಡಿಪಡಿಸುವಿಕೆಯಿಂದ ಮಸೂದೆಗಳ ಕುರಿತು ನಡೆದ ಚರ್ಚೆಯ ಗುಣಮಟ್ಟ ತೃಪ್ತಿಕರವಾಗಿರಲಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧವಿತ್ತು. ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಬಯಸಿತ್ತು. ಆದರೆ ಪ್ರತಿಪಕ್ಷ ಚರ್ಚೆಯಿಂದ ದೂರ ಉಳಿಯುವ ಮಾರ್ಗವನ್ನು ಅನುಸರಿಸಿತು ಎಂದು ಆರೋಪಿಸಿದರು.
ಮುಂಗಾರು ಅಧಿವೇಶನದಲ್ಲಿ ಲೋಕಸಭೆಯ ಕಾರ್ಯಸಾಧಕತೆ ಶೇ.19ರಷ್ಟಿದ್ದರೆ, ರಾಜ್ಯಸಭೆಯ ಕಾರ್ಯಸಾಧಕತೆ ಶೇ.39ರಷ್ಟಿತ್ತು. ಲೋಕಸಭೆಯ ಕಲಾಪ ಹೆಚ್ಚಿನ ಪ್ರಮಾಣದಲ್ಲಿ ಅಡ್ಡಿಪಡಿಸಲ್ಪಟ್ಟಿದ್ದು, ರಾಜ್ಯಸಭೆಯಲ್ಲಿ ಕೆಲ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದರೂ ಕೆಲವು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು ಎಂದು ರಿಜಿಜು ತಿಳಿಸಿದರು.
ಅಧಿವೇಶನದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ-2026 ಅನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ-2026 ಕೂಡ ಅಂಗೀಕಾರಗೊಂಡಿತು. ಈ ಮಸೂದೆಯೊಂದರ ಕುರಿತು ಮಾತ್ರ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಉಳಿದ ಬಹುತೇಕ ಮಸೂದೆಗಳು ಚರ್ಚೆಯಿಲ್ಲದೆ ಅಂಗೀಕಾರಗೊಂಡವು ಎಂದು ಸಚಿವರು ಹೇಳಿದರು.
ವಂದೇ ಮಾತರಂಗೆ ರಾಷ್ಟ್ರಗೀತೆಯ ಸಮಾನ ಗೌರವ ನೀಡುವ ರಾಷ್ಟ್ರ ಗೌರವ ಅವಮಾನ ತಡೆ ತಿದ್ದುಪಡಿ ಮಸೂದೆ-2026, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದ ಮಸೂದೆ ಹಾಗೂ ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಿಸುವ ಕೇರಳ (ಹೆಸರು ಬದಲಾವಣೆ) ಮಸೂದೆ ಸೇರಿದಂತೆ ಹಲವು ಮಸೂದೆಗಳಿಗೆ ಸಂಸತ್ತಿನ ಅನುಮೋದನೆ ದೊರೆಯಿತು.
ಜನನ ಮತ್ತು ಮರಣ ನೋಂದಣಿ ತಿದ್ದುಪಡಿ, ವಿನಿಯೋಗ ಮಸೂದೆ, ಸೂಕ್ಷ್ಮ-ಸಣ್ಣ-ಮಧ್ಯಮ ಉದ್ಯಮಗಳ ಅಭಿವೃದ್ಧಿ ತಿದ್ದುಪಡಿ, ಬ್ಯಾಂಕರ್‌ಗಳ ಪುಸ್ತಕ ಸಾಕ್ಷ್ಯ, ತೆರಿಗೆ ಮತ್ತು ಇತರ ಕಾನೂನುಗಳ ತಿದ್ದುಪಡಿ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ತಿದ್ದುಪಡಿ, ನ್ಯಾಯಮಂಡಳಿ ಸುಧಾರಣೆ ಹಾಗೂ ಗಣಿ ಮತ್ತು ಖನಿಜ ಅಭಿವೃದ್ಧಿ-ನಿಯಂತ್ರಣ ತಿದ್ದುಪಡಿ ಮಸೂದೆಗಳೂ ಅಂಗೀಕಾರಗೊಂಡಿವೆ.
ನಾರೆ ಕೂಗುವುದು ಮತ್ತು ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟಿಸುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ ಎಂದು ರಿಜಿಜು ಹೇಳಿದರು. ವಿಶೇಷವಾಗಿ ಹೊಸ ಸಂಸದರಿಗೆ ಅರ್ಥಪೂರ್ಣ ಚರ್ಚೆ ಮತ್ತು ವಿಚಾರ ವಿನಿಮಯದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯದಿರುವುದು ಆತಂಕಕಾರಿ ಎಂದರು.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಪಕ್ಷಗಳು ಆತ್ಮಾವಲೋಕನ ಮಾಡಿಕೊಂಡು ಸಹಕಾರ ನೀಡಬೇಕು. ಸಂಸತ್ತಿನಲ್ಲಿ ಹೆಚ್ಚು ಅರ್ಥಪೂರ್ಣ ಹಾಗೂ ರಚನಾತ್ಮಕ ಚರ್ಚೆ ನಡೆಯುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಜುಲೈ 20ರಂದು ಆರಂಭಗೊಂಡಿದ್ದ ಮುಂಗಾರು ಅಧಿವೇಶನ ಆ.13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದು, ಈ ಅವಧಿಯಲ್ಲಿ ಉಭಯ ಸದನಗಳ ಒಟ್ಟು 19 ಸಭೆಗಳು ನಡೆದವು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.