
ನವದೆಹಲಿ, 13 ಆಗಸ್ಟ್ (ಹಿ.ಸ.):
ಆ್ಯಂಕರ್:
ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ‍್ಯಾಲಿ ನಡೆದ ಬಳಿಕ ನಡೆದಿರುವ ಶುದ್ಧೀಕರಣ ಕಾರ್ಯಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉತ್ತರಾಖಂಡ ಕಾಂಗ್ರೆಸ್ ಉಸ್ತುವಾರಿ ಕುಮಾರಿ ಶೈಲಜಾ, ಈ ಘಟನೆ ಬಿಜೆಪಿ ಹೊಂದಿರುವ ದಲಿತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಶುದ್ಧೀಕರಣ ಕಾರ್ಯಕ್ರಮ ನಡೆಸಿದವರ ವಿರುದ್ಧ ಈವರೆಗೆ ಎಫ್‌ಐಆರ್ ದಾಖಲಾಗದಿರುವುದು ಆತಂಕಕಾರಿ ವಿಷಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆ.8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನ ‘ವಿಜಯ ಶಂಖನಾದ ರ‍್ಯಾಲಿ’ ನಡೆದಿತ್ತು. ಖರ್ಗೆ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಆ.10ರಂದು ಇದೇ ಮೈದಾನದಲ್ಲಿ ‘ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ’ದ ವತಿಯಿಂದ ಹವನ-ಪೂಜೆ ಹಾಗೂ ಶುದ್ಧೀಕರಣ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದ ಛಾಯಾಚಿತ್ರಗಳು ಮತ್ತು ದೃಶ್ಯಾವಳಿಗಳು ಬಹಿರಂಗವಾದ ಬಳಿಕ ವಿವಾದ ತೀವ್ರಗೊಂಡಿದೆ.
ಶೈಲಜಾ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಇಂತಹ ಕೃತ್ಯಗಳಿಗೆ ಮುಂದಾಗುತ್ತದೆ ಎಂದು ಆರೋಪಿಸಿದರು. ಹಲ್ದ್ವಾನಿಯಲ್ಲಿ ಖರ್ಗೆ ಅವರ ರ‍್ಯಾಲಿಯನ್ನು ತಡೆಯಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಿ ನಡೆಯಿತು. ಬಳಿಕ ರ‍್ಯಾಲಿ ನಡೆದ ಸ್ಥಳವನ್ನೇ ಶುದ್ಧೀಕರಿಸಿರುವುದು ದಲಿತ ವಿರೋಧಿ ಮನೋಭಾವದ ಸಾಕ್ಷಿಯಾಗಿದೆ ಎಂದರು.
ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್ ಘಟನೆಯನ್ನು ಖಂಡಿಸಿ, ಪಕ್ಷದ ಎಲ್ಲ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸುವಂತೆ ಸೂಚಿಸಲಾಗಿದೆ ಎಂದರು. ಪರಿಶಿಷ್ಟ ಜಾತಿಯ ಜನರು ಬಿಜೆಪಿ ಮನಸ್ಸಿನಲ್ಲಿರುವ ದ್ವೇಷವನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಶಪಾಲ್ ಆರ್ಯ ಮಾತನಾಡಿ, ಖರ್ಗೆ ಭಾಷಣ ಮಾಡಿದ ವೇದಿಕೆಯಲ್ಲಿ ಹವನ ನಡೆಸಿ ಶುದ್ಧೀಕರಣ ಮಾಡಿರುವುದು ಬಿಜೆಪಿಯ ‘ನಿಜವಾದ ಮುಖ’ವನ್ನು ತೋರಿಸಿದೆ ಎಂದು ಆರೋಪಿಸಿದರು. ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗೆ ದೀರ್ಘಕಾಲ ಕೆಲಸ ಮಾಡಿರುವ ಖರ್ಗೆ ಅವರೊಂದಿಗೆ ಇಂತಹ ಘಟನೆ ನಡೆದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮ ಆಯೋಜಿಸಿದ್ದ ಧಾರ್ಮಿಕ ಸಂಘಟನೆ, ಕಾಂಗ್ರೆಸ್ ರ‍್ಯಾಲಿಯಲ್ಲಿ ಮಾಡಲಾಗಿದೆ ಎನ್ನಲಾದ ಘೋಷಣೆಗಳು ಮತ್ತು ಹೇಳಿಕೆಗಳ ವಿರೋಧವಾಗಿ ಹವನ-ಪೂಜೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಘಟನೆಯನ್ನು ಕಾಂಗ್ರೆಸ್ ಜಾತಿ ಆಧಾರಿತ ತಾರತಮ್ಯಕ್ಕೆ ಸಂಬಂಧಿಸಿ ರಾಜಕೀಯವಾಗಿ ವಿರೋಧಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.