

ನವದೆಹಲಿ, 12 ಆಗಸ್ಟ್ (ಹಿ.ಸ.):
ಆ್ಯಂಕರ್:ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುತ್ತಿರುವ ‘ಹರ್ ಘರ್ ತಿರಂಗಾ 2026’ ಅಭಿಯಾನದಡಿಯ ವಿಶೇಷ ಬೈಕ್ ರ್ಯಾಲಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಬುಧವಾರ ಸಂಸದರೊಂದಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಈ ರ‍್ಯಾಲಿಯು ರಾಷ್ಟ್ರಗೀತೆ ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಅಂಗವಾಗಿ ನಡೆಯಿತು. ಕೇಂದ್ರ ಸಚಿವರಾದ ಕಿರಣ್ ರಿಜಿಜು, ರಾಜೀವ್ ರಂಜನ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ವೀರೇಂದ್ರ ಕುಮಾರ್, ಜಿ. ಕಿಶನ್ ರೆಡ್ಡಿ, ಜಿತೇಂದ್ರ ಸಿಂಗ್ ಸೇರಿದಂತೆ ಹಲವು ಸಂಸದರು ಹಾಗೂ ಗಣ್ಯರು ರ‍್ಯಾಲಿಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ರಾಧಾಕೃಷ್ಣನ್, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಿದ ಮಹತ್ವದ ಪ್ರೇರಣೆಯಾಗಿತ್ತು ಎಂದರು. ಭಾಷೆ, ಪ್ರದೇಶ ಹಾಗೂ ಧರ್ಮದ ಎಲ್ಲೆಗಳನ್ನು ಮೀರಿ ದೇಶವನ್ನು ಒಗ್ಗೂಡಿಸುವಲ್ಲಿ ಸ್ವಾತಂತ್ರ್ಯ ಹೋರಾಟ ಪ್ರಮುಖ ಪಾತ್ರ ವಹಿಸಿದ್ದು, ‘ವಂದೇ ಮಾತರಂ’ ರಾಷ್ಟ್ರೀಯ ಚೈತನ್ಯದ ಪ್ರಬಲ ಸಂಕೇತವಾಗಿತ್ತು ಎಂದು ಹೇಳಿದರು.
‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ದೇಶವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸ್ವಾತಂತ್ರ್ಯ ದಿನದಂದು ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಅವರು ಕರೆ ನೀಡಿದರು.
ರ‍್ಯಾಲಿಯಲ್ಲಿ ಸಂಸದರು ಹಾಗೂ ಯುವಕರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಪುನರುಚ್ಚರಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.