
ನವದೆಹಲಿ, 12 ಆಗಸ್ಟ್ (ಹಿ.ಸ.):
ಆ್ಯಂಕರ್:ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ತಮ್ಮ ಪ್ರಸ್ತುತ ಅಧಿಕಾರಾವಧಿ 2027ರ ಫೆಬ್ರವರಿ 20ರಂದು ಪೂರ್ಣಗೊಂಡ ಬಳಿಕ ಮತ್ತೊಂದು ಅವಧಿಗೆ ಮರುನೇಮಕಗೊಳ್ಳಲು ತಮ್ಮ ಹೆಸರನ್ನು ಪರಿಗಣನೆಗೆ ಸಲ್ಲಿಸುವುದಿಲ್ಲ ಎಂದು ಬುಧವಾರ ಘೋಷಿಸಿದ್ದಾರೆ. ಜತೆಗೆ, ಸೂಕ್ತ ಉತ್ತರಾಧಿಕಾರಿಯನ್ನು ಶೀಘ್ರ ಆಯ್ಕೆ ಮಾಡುವಂತೆ ಮಂಡಳಿಗೆ ಮನವಿ ಮಾಡಿದ್ದಾರೆ.
63 ವರ್ಷದ ಚಂದ್ರಶೇಖರನ್ ಅವರು ಟಾಟಾ ಸಮೂಹದಲ್ಲಿ ತಮ್ಮ ವೃತ್ತಿಜೀವನಕ್ಕೆ 40 ವರ್ಷಗಳು ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಗೆ ಸೇವೆ ಸಲ್ಲಿಸಿರುವುದು ತಮಗೆ ಅತ್ಯಂತ ತೃಪ್ತಿ ನೀಡಿದೆ. ಕಳೆದ ಒಂದು ದಶಕದಿಂದ ಟಾಟಾ ಸನ್ಸ್‌ಗೆ ನಾಯಕತ್ವ ವಹಿಸಿರುವುದು ದೊಡ್ಡ ಗೌರವ ಮತ್ತು ಮಹತ್ತರ ಜವಾಬ್ದಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ.
ಸರ್ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ ರತನ್ ಟಾಟಾ ಟ್ರಸ್ಟ್‌ಗಳು ತಮ್ಮ ಮುಂದಿನ ಐದು ವರ್ಷಗಳ ಅಧಿಕಾರಾವಧಿಯನ್ನು ವಿಸ್ತರಿಸಲು ಸರ್ವಾನುಮತದಿಂದ ಶಿಫಾರಸು ಮಾಡಿದ್ದವು. ಈ ಪ್ರಸ್ತಾವನೆಯನ್ನು ಟಾಟಾ ಸನ್ಸ್‌ನ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಹಾಗೂ ಮಂಡಳಿಯೂ ಶಿಫಾರಸು ಮಾಡಿತ್ತು ಎಂದು ಚಂದ್ರಶೇಖರನ್ ತಿಳಿಸಿದ್ದಾರೆ.
ಆದರೆ, ಫೆಬ್ರವರಿ 24ರಂದು ನಡೆದ ಮಂಡಳಿ ಸಭೆಯಲ್ಲಿ ಸರ್ವಾನುಮತದ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮುಂದೂಡುವ ಆಯ್ಕೆಯನ್ನು ತಾವು ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಆರು ತಿಂಗಳು ಕಳೆದರೂ ಈ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಇದೇ ವೇಳೆ ಟಾಟಾ ಸನ್ಸ್ ಹಲವು ಮಹತ್ವದ ಕಾರ್ಯತಂತ್ರದ ಯೋಜನೆಗಳ ಅನುಷ್ಠಾನದ ನಿರ್ಣಾಯಕ ಹಂತದಲ್ಲಿದೆ. ಹೀಗಾಗಿ 2027ರ ಫೆಬ್ರವರಿ ಬಳಿಕ ಸಮೂಹವನ್ನು ಮುನ್ನಡೆಸುವವರ ಕುರಿತು ಸ್ಪಷ್ಟತೆ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುಗಮ ಅಧಿಕಾರ ಹಸ್ತಾಂತರಕ್ಕೆ ಅನುಕೂಲವಾಗುವಂತೆ ಉತ್ತರಾಧಿಕಾರಿಯ ಆಯ್ಕೆ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮಂಡಳಿಗೆ ಮನವಿ ಮಾಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಬೆಂಬಲ ನೀಡಿದ ಎಲ್ಲ ಪಾಲುದಾರರು ಹಾಗೂ ಹಿತಾಸಕ್ತಿದಾರರಿಗೆ ಚಂದ್ರಶೇಖರನ್ ಕೃತಜ್ಞತೆ ಸಲ್ಲಿಸಿದ್ದಾರೆ.
ಚಂದ್ರಶೇಖರನ್ ಅವರು 2017ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ನಾಯಕತ್ವದಲ್ಲಿ ಟಿಸಿಎಸ್ ಜಾಗತಿಕ ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ದಾಖಲಿಸಿತ್ತು.
ಚಂದ್ರಶೇಖರನ್ ನೇತೃತ್ವದಲ್ಲಿ ಟಾಟಾ ಸಮೂಹವು ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಿತು. ವಿದ್ಯುತ್ ವಾಹನಗಳು, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಿತು. ಸಮೂಹದ ವಿವಿಧ ಸಂಸ್ಥೆಗಳಲ್ಲಿ ಡಿಜಿಟಲ್ ಪರಿವರ್ತನೆ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಒತ್ತು ನೀಡಲಾಯಿತು.
ಟಾಟಾ ಸಮೂಹವನ್ನು ಆಧುನೀಕರಿಸುವಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಸುವಲ್ಲಿ ಚಂದ್ರಶೇಖರನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪರಿಗಣಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.