
ನವದೆಹಲಿ, 12 ಆಗಸ್ಟ್ (ಹಿ.ಸ.):
ಆ್ಯಂಕರ್:ದಶಕಗಳ ಕಾಲ ಗಂಗಾ ನದಿ ಮೇಲ್ಬಾಗದಲ್ಲಿ ಬಹುತೇಕ ಕಣ್ಮರೆಯಾಗಿದ್ದ ಪ್ರತಿಷ್ಠಿತ ಹಿಲ್ಸಾ ಮೀನು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಟಾಂಡಾ ಖುರ್ಡ್ ಗ್ರಾಮದ ಬಳಿ ಪತ್ತೆಯಾಗಿರುವುದು ಗಂಗಾ ನದಿಯ ಪರಿಸರ ವ್ಯವಸ್ಥೆ ಹಾಗೂ ಜಲಚರ ಜೀವವೈವಿಧ್ಯದ ಪುನಶ್ಚೇತನಕ್ಕೆ ಮಹತ್ವದ ಬೆಳವಣಿಗೆಯಾಗಿದೆ.
ಐತಿಹಾಸಿಕವಾಗಿ ಬಂಗಾಳ ಕೊಲ್ಲಿಯಿಂದ ಗಂಗಾ ನದಿಯ ಮೂಲಕ ವಾರಾಣಸಿ, ಪ್ರಯಾಗರಾಜ್ ಸೇರಿದಂತೆ ಮೇಲ್ಭಾಗದ ಪ್ರದೇಶಗಳಿಗೆ ಹಿಲ್ಸಾ ಮೀನು ವಲಸೆ ಬರುತ್ತಿತ್ತು. ಆದರೆ 1975ರಲ್ಲಿ ಫರಕ್ಕಾ ಅಣೆಕಟ್ಟು ಕಾರ್ಯಾರಂಭವಾದ ಬಳಿಕ ಅದರ ವಲಸೆ ಮಾರ್ಗಕ್ಕೆ ಅಡ್ಡಿಯುಂಟಾಗಿ ಮಧ್ಯ ಮತ್ತು ಮೇಲ್ಗಂಗೆಯಲ್ಲಿ ಹಿಲ್ಸಾ ಮೀನುಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು.
ಹಿಲ್ಸಾ ಸಂರಕ್ಷಣೆ ಹಾಗೂ ಪುನರ್ವಸತಿಗಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕೇಂದ್ರೀಯ ಒಳನಾಡು ಮೀನುಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟ್ರೀಯ ಸ್ವಚ್ಛ ಗಂಗಾ ಅಭಿಯಾನ 2019ರಿಂದ ದೀರ್ಘಾವಧಿಯ ಕಾರ್ಯಕ್ರಮವನ್ನು ಜಾರಿಗೊಳಿಸಿವೆ. 2026ರ ಜೂನ್ವರೆಗೆ 3.85 ಲಕ್ಷಕ್ಕೂ ಅಧಿಕ ಮರಿಹುಳು ಮತ್ತು ವಯಸ್ಕ ಹಿಲ್ಸಾ ಮೀನುಗಳನ್ನು ನದಿಗೆ ಬಿಡಲಾಗಿದ್ದು, 40 ಲಕ್ಷಕ್ಕೂ ಅಧಿಕ ಫಲವತ್ತಾದ ಮೊಟ್ಟೆಗಳನ್ನೂ ಸೇರಿಸಲಾಗಿದೆ. ಸುಮಾರು 9.4 ಲಕ್ಷ ಕೃತಕವಾಗಿ ಉತ್ಪಾದಿಸಿದ ಮರಿಹುಳುಗಳನ್ನು ನದಿಗೆ ಬಿಡಲಾಗಿದೆ.
ಮೀನುಗಳ ಗುರುತಿನ ಚೀಟಿ ಅಳವಡಿಕೆ, ನಿರಂತರ ಮೇಲ್ವಿಚಾರಣೆ ಹಾಗೂ ವಲಸೆ ಅಧ್ಯಯನ ನಡೆಸಲಾಗಿದ್ದು, ಕೃತಕ ಸಂತಾನೋತ್ಪತ್ತಿ ಮತ್ತು ಮೀನು ಸಂಪತ್ತು ಹೆಚ್ಚಿಸುವ ತಂತ್ರಗಳನ್ನು ಬಳಸಲಾಗಿದೆ. 2023ರಿಂದ 2025ರ ಅವಧಿಯಲ್ಲಿ ಮೇಲ್ವಿಚಾರಣೆಯ ವೇಳೆ ನದಿಗೆ ಬಿಡಲಾಗಿದ್ದ ಹಿಲ್ಸಾ ಮೀನುಗಳು ಮಿರ್ಜಾಪುರದವರೆಗೆ ಮೇಲ್ದಿಕ್ಕಿನಲ್ಲಿ ಸಾಗಿರುವುದು ದಾಖಲಾಗಿತ್ತು. ಇದೀಗ ಚಂದೌಲಿಯಲ್ಲಿ ಎರಡು ಹಿಲ್ಸಾ ಮೀನುಗಳು ಪತ್ತೆಯಾಗಿರುವುದು ಅವುಗಳ ಐತಿಹಾಸಿಕ ವಲಸೆ ಪ್ರದೇಶದ ಪುನಃಸ್ಥಾಪನೆಯ ಮತ್ತಷ್ಟು ಬಲವಾದ ಸೂಚನೆಯಾಗಿದೆ. ಎರಡೂ ಮೀನುಗಳ ಒಟ್ಟು ತೂಕ 740 ಗ್ರಾಂ ಎಂದು ತಿಳಿಸಲಾಗಿದೆ.
ಹಿಲ್ಸಾ ಸೂಕ್ಷ್ಮ ಹಾಗೂ ವಲಸೆ ಸ್ವಭಾವದ ಜಲಚರ ಪ್ರಭೇದವಾಗಿರುವುದರಿಂದ ಮೇಲ್ಗಂಗೆಯಲ್ಲಿ ಅದರ ಉಪಸ್ಥಿತಿಯನ್ನು ನದಿಯ ಜಲಸಂಪರ್ಕ, ವಾಸಸ್ಥಳದ ಗುಣಮಟ್ಟ ಮತ್ತು ಪರಿಸರ ಸ್ಥಿತಿಯಲ್ಲಿ ಸುಧಾರಣೆಯ ಪ್ರಮುಖ ಜೈವಿಕ ಸೂಚಕವೆಂದು ಪರಿಗಣಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಐಎಫ್ಆರ್ಐ ನಿರ್ದೇಶಕ ಡಾ. ಪ್ರದೀಪ್ ದೇ , ಮೀನು ಸಂಪನ್ಮೂಲಗಳ ಪುನಶ್ಚೇತನವನ್ನು ಸಮಗ್ರ ಪರಿಸರ ಪುನಶ್ಚೇತನ ಮತ್ತು ಸುಸ್ಥಿರ ಜೀವನೋಪಾಯದ ಭಾಗವಾಗಿ ಪರಿಗಣಿಸಬೇಕು. ಮೀನುಗಳ ವಲಸೆ, ನದಿ ವಾಸಸ್ಥಳ, ಜೀವವೈವಿಧ್ಯ, ಜಲ ನಿರ್ವಹಣೆ ಹಾಗೂ ಮೀನುಗಾರ ಸಮುದಾಯಗಳ ಅಗತ್ಯಗಳನ್ನು ಸಮನ್ವಯಗೊಳಿಸುವುದು ಅಗತ್ಯ ಎಂದಿದ್ದಾರೆ.
ಹಿಲ್ಸಾ ಮೀನುಗಳ ಮರಳುವಿಕೆಯಿಂದ ನದಿಯನ್ನು ಅವಲಂಬಿಸಿರುವ ಮೀನುಗಾರ ಸಮುದಾಯಗಳಿಗೆ ಮೀನು ಲಭ್ಯತೆ ಹಾಗೂ ಜೀವನೋಪಾಯದ ಅವಕಾಶಗಳು ಹೆಚ್ಚುವ ನಿರೀಕ್ಷೆಯಿದೆ. ಅಲ್ಲದೆ, ಗಂಗೆಯಲ್ಲಿರುವ ಇತರ ಸ್ಥಳೀಯ ಮತ್ತು ವಲಸೆ ಜಲಚರ ಪ್ರಭೇದಗಳ ಪುನಶ್ಚೇತನಕ್ಕೂ ಈ ಕಾರ್ಯಕ್ರಮ ಮಾದರಿಯಾಗುವ ಸಾಧ್ಯತೆಯಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.