
ನವದೆಹಲಿ, 11 ಆಗಸ್ಟ್ (ಹಿ.ಸ.):
ಆ್ಯಂಕರ್:ಬೆಂಗಳೂರು ಸೇರಿದಂತೆ ದೇಶದ 18 ನಗರಗಳಲ್ಲಿ ನಗರ ಪ್ರವಾಹದ ಅಪಾಯವನ್ನು ಕಡಿಮೆ ಮಾಡುವ ಹಾಗೂ ಮಳೆನೀರು ಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಗರ ಪ್ರವಾಹ ಅಪಾಯ ನಿರ್ವಹಣಾ ಕಾರ್ಯಕ್ರಮದಡಿ (ಯುಎಫ್‌ಆರ್‌ಎಂಪಿ) ₹5,520.07 ಕೋಟಿ ಮಂಜೂರು ಮಾಡಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದರು.
ಕಾರ್ಯಕ್ರಮದ ಮೊದಲ ಹಂತದಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ, ಮುಂಬೈ ಮತ್ತು ಪುಣೆ ಸೇರಿದಂತೆ ಏಳು ನಗರಗಳಿಗೆ ₹3,075.65 ಕೋಟಿ ಮಂಜೂರು ಮಾಡಲಾಗಿದೆ. ಎರಡನೇ ಹಂತದಲ್ಲಿ ಭೋಪಾಲ್, ಭುವನೇಶ್ವರ, ಗುವಾಹಟಿ, ಜೈಪುರ, ಕಾನ್ಪುರ, ಪಾಟ್ನಾ, ರಾಯಪುರ, ತಿರುವನಂತಪುರಂ, ವಿಶಾಖಪಟ್ಟಣಂ, ಇಂದೋರ್ ಮತ್ತು ಲಖನೌ ಸೇರಿದಂತೆ 11 ನಗರಗಳಿಗೆ ₹2,444.42 ಕೋಟಿ ಮಂಜೂರಾಗಿದೆ.
ಬೆಂಗಳೂರಿಗೆ ₹238.72 ಕೋಟಿ
ರಾಷ್ಟ್ರೀಯ ವಿಪತ್ತು ಶಮನ ನಿಧಿಯಿಂದ ಯೋಜನೆಗಳಿಗೆ ಕೇಂದ್ರದ ಹಣಕಾಸು ನೆರವು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಅಹಮದಾಬಾದ್‌ಗೆ ₹243.90 ಕೋಟಿ, ಬೆಂಗಳೂರಿಗೆ ₹238.72 ಕೋಟಿ, ಚೆನ್ನೈಗೆ ₹500 ಕೋಟಿ, ಹೈದರಾಬಾದ್‌ಗೆ ₹250 ಕೋಟಿ, ಕೊಲ್ಕತ್ತಾಗೆ ₹500 ಕೋಟಿ, ಮುಂಬೈಗೆ ₹500 ಕೋಟಿ ಮತ್ತು ಪುಣೆಗೆ ₹250 ಕೋಟಿ ಮಂಜೂರು ಮಾಡಲಾಗಿದೆ.
ಎರಡನೇ ಹಂತದ ನಗರಗಳಿಗೆ ತಲಾ ₹180ರಿಂದ ₹200 ಕೋಟಿವರೆಗೆ ನೆರವು ನಿಗದಿಪಡಿಸಲಾಗಿದೆ. ಗುವಾಹಟಿಗೆ ₹180 ಕೋಟಿ ಮಂಜೂರಾಗಿದ್ದು, ಈ ಪೈಕಿ ₹54 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ ನಗರಗಳಿಗೆ ಕೇಂದ್ರದ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಸಚಿವರು ತಿಳಿಸಿದರು.
ಜಲಾವೃತ ಸಮಸ್ಯೆ ಕಡಿಮೆ ಮಾಡುವ ಗುರಿ
ಯೋಜನೆಗಳ ಅನುಷ್ಠಾನದಿಂದ ನಗರಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಸುಧಾರಿಸುವುದು, ಪ್ರವಾಹ ಮತ್ತು ಜಲಾವೃತ ಸಮಸ್ಯೆ ಕಡಿಮೆ ಮಾಡುವುದು, ರಸ್ತೆ ಸಂಪರ್ಕ ಉತ್ತಮಗೊಳಿಸುವುದು ಹಾಗೂ ಚರಂಡಿ ಜಾಲದ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಮಂಜೂರಾದ ಯೋಜನೆಗಳನ್ನು ಸಂಬಂಧಿಸಿದ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿವೆ. ಮೊದಲ ಹಂತದ ಎಲ್ಲ ಏಳು ನಗರಗಳು ಹಾಗೂ ಎರಡನೇ ಹಂತದ ಗುವಾಹತಿಯಲ್ಲಿ ವಿವಿಧ ಹಂತಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಲಕಾಲಕ್ಕೆ ಸಭೆಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.