
ನವದೆಹಲಿ, 11 ಆಗಸ್ಟ್ (ಹಿ.ಸ.):
ಆ್ಯಂಕರ್:
ಸಹಕಾರ ಸಂಘಗಳಿಗೆ ನೇರವಾಗಿ ಸಾಲ ಮತ್ತು ಅನುದಾನ ಒದಗಿಸಲು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ (ಎನ್‌ಸಿಡಿಸಿ) ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ, 2026 ಅನ್ನು ಲೋಕಸಭೆ ಮಂಗಳವಾರ ಗದ್ದಲದ ನಡುವೆಯೇ ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಿತು.
ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ವಿಧೇಯಕವನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದರು. 1963ರಲ್ಲಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಕಾಯ್ದೆ, 1962ರ ಅಡಿಯಲ್ಲಿ ಸ್ಥಾಪನೆಯಾದ ಎನ್‌ಸಿಡಿಸಿ, ಸಹಕಾರ ಸಚಿವಾಲಯದ ಅಧೀನದಲ್ಲಿರುವ ಶಾಸನಬದ್ಧ ಸಂಸ್ಥೆಯಾಗಿದೆ.
ವಿಧೇಯಕದ ಪ್ರಮುಖ ಉದ್ದೇಶ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಅರ್ಹ ಸಂಸ್ಥೆಗಳಿಗೆ ಅಗತ್ಯ ಭದ್ರತೆ ಪಡೆದು ನೇರವಾಗಿ ಸಾಲ ಮತ್ತು ಅನುದಾನ ನೀಡುವ ಅಧಿಕಾರವನ್ನು ಎನ್‌ಸಿಡಿಸಿಗೆ ಕಲ್ಪಿಸುವುದು ಎಂದು ಸಚಿವರು ತಿಳಿಸಿದರು.
ಆಹಾರ ಸಂಸ್ಕರಣೆ, ಗುಡಿ ಕೈಗಾರಿಕೆ, ಕರಕುಶಲ ಸೇರಿದಂತೆ ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿರುವ ಸಹಕಾರ ಸಂಸ್ಥೆಗಳಿಗೂ ಹಣಕಾಸು ನೆರವು ದೊರೆಯಲಿದೆ. ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಸಂಬಂಧಿತ ಸಂಸ್ಥೆಗಳ ಷೇರು ಬಂಡವಾಳದಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ವಿಧೇಯಕದಲ್ಲಿ ಕಲ್ಪಿಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಹೆಚ್ಚುವರಿ ಬಜೆಟ್ ನೆರವು ನೀಡುವ ಪ್ರಸ್ತಾವ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನೇರ ಹಣಕಾಸು ನೆರವಿಗೆ ಅವಕಾಶ
ಈವರೆಗೆ ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರೂ ಸಹಕಾರ ಸಂಘವಾಗಿ ನೋಂದಣಿಯಾಗದ ಸಂಸ್ಥೆಗಳಿಗೆ ಎನ್‌ಸಿಡಿಸಿ ನೇರವಾಗಿ ಹಣಕಾಸು ನೆರವು ನೀಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಹಲವು ಪ್ರಸ್ತಾವನೆಗಳು ರಾಜ್ಯ ಸರ್ಕಾರ ಅಥವಾ ಸಹಕಾರ ಸಂಘಗಳ ಮೂಲಕ ಬರಬೇಕಾಗಿದ್ದರಿಂದ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಹೊಸ ತಿದ್ದುಪಡಿಯಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದು ಮೊಹೋಲ್ ಹೇಳಿದರು.
ವಿಧೇಯಕದ 13ಎ ವಿಧಿಯಡಿ, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕಿಂಗ್ ಕಂಪನಿಗಳು ಮತ್ತು ಅಧಿಸೂಚಿತ ಹಣಕಾಸು ಸಂಸ್ಥೆಗಳೊಂದಿಗೆ ಸಾಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಅಧಿಕಾರವನ್ನು ಎನ್‌ಸಿಡಿಸಿಗೆ ನೀಡಲು ಪ್ರಸ್ತಾಪಿಸಲಾಗಿದೆ.
12 ವರ್ಷಗಳಲ್ಲಿ ವಿತರಣೆ ಹತ್ತು ಪಟ್ಟು ಹೆಚ್ಚಳ
ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದ ಸಚಿವರು, ಕಳೆದ 12 ವರ್ಷಗಳಲ್ಲಿ ಎನ್‌ಸಿಡಿಸಿ ಮೂಲಕ ಮಾಡಲಾದ ಹಣಕಾಸು ವಿತರಣೆಯಲ್ಲಿ ಸುಮಾರು ಹತ್ತು ಪಟ್ಟು ಹೆಚ್ಚಳವಾಗಿದೆ ಎಂದರು.
1963ರಿಂದ 2014ರವರೆಗೆ ಎನ್‌ಸಿಡಿಸಿ ಮೂಲಕ ಸುಮಾರು 45 ಸಾವಿರ ಕೋಟಿ ರೂ. ವಿತರಿಸಲಾಗಿತ್ತು ಎಂದು ಅವರು ತಿಳಿಸಿದರು.
ದೇಶದಲ್ಲಿ ಸುಮಾರು 8 ಲಕ್ಷ ಸಹಕಾರ ಸಂಘಗಳು 30 ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 30 ಕೋಟಿ ಸದಸ್ಯರನ್ನು ಹೊಂದಿವೆ. ಆರಂಭದಲ್ಲಿ ಕೃಷಿ ಉತ್ಪನ್ನ, ಆಹಾರ, ಕೈಗಾರಿಕಾ ಉತ್ಪಾದನೆ, ಪಶುಸಂಗೋಪನೆ ಹಾಗೂ ಸಂಬಂಧಿತ ಸೇವೆಗಳಿಗೆ ಸೀಮಿತವಾಗಿದ್ದ ಎನ್‌ಸಿಡಿಸಿಯ ಕಾರ್ಯವ್ಯಾಪ್ತಿ ನಂತರ ಸಂಸ್ಕರಣೆ, ಮಾರುಕಟ್ಟೆ, ಸಂಗ್ರಹಣೆ, ರಫ್ತು-ಆಮದು ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿತು.
ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿಯೂ ಎನ್‌ಸಿಡಿಸಿಯ ಪಾತ್ರ ಹೆಚ್ಚಾಗಿದೆ. ಹೊಸ ತಿದ್ದುಪಡಿಯಿಂದ ಸಹಕಾರ ಕ್ಷೇತ್ರಕ್ಕೆ ನೇರ ಹಣಕಾಸು ನೆರವು ಒದಗಿಸುವ ವ್ಯವಸ್ಥೆ ಮತ್ತಷ್ಟು ವಿಸ್ತಾರಗೊಳ್ಳುವ ನಿರೀಕ್ಷೆಯಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.