ಆಗಸ್ಟ್ 19ರಿಂದ 21ರವರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗುಡಿಲೋವಾದಲ್ಲಿ ಆರ್ಎಸ್ಎಸ್ ಪ್ರೇರಿತ 32 ಸಂಘಟನೆಗಳ ಅಖಿಲ ಭಾರತ ಸಮನ್ವಯ ಸಭೆ
ನವದೆಹಲಿ, 10 ಆಗಸ್ಟ್ (ಹಿ.ಸ.): ಆ್ಯಂಕರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳ ಅಖಿಲ ಭಾರತ ಸಮನ್ವಯ ಸಭೆ ಆಗಸ್ಟ್ 19ರಿಂದ 21ರವರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗುಡಿಲೋವಾದಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸ
ಆರ್ ಎಸ್ ಎಸ್ ಎಕ್ಸನಲ್ಲಿ ಬಿಡುಗಡೆ ಮಾಡಿರುವ ಚಿತ್ರ


ನವದೆಹಲಿ, 10 ಆಗಸ್ಟ್ (ಹಿ.ಸ.):

ಆ್ಯಂಕರ್:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳ ಅಖಿಲ ಭಾರತ ಸಮನ್ವಯ ಸಭೆ ಆಗಸ್ಟ್ 19ರಿಂದ 21ರವರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗುಡಿಲೋವಾದಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ ತಿಳಿಸಿದ್ದಾರೆ.

ಈ ಕುರಿತು ಎಕ್ಸನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಯುಗಾಬ್ದ 5128 ಹಾಗೂ ವಿಕ್ರಮ ಸಂವತ್ 2083ರ ಶ್ರಾವಣ ಶುಕ್ಲ ಸಪ್ತಮಿ, ಅಷ್ಟಮಿ ಮತ್ತು ನವಮಿ ದಿನಗಳಂದು ನಡೆಯಲಿರುವ ಈ ಅಖಿಲ ಭಾರತ ಸಮನ್ವಯ ಸಭೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ. ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ಪ್ರೇರಿತ ಸಂಘಟನೆಗಳ ನಡುವೆ ಸಮನ್ವಯ, ಸಹಕಾರ ಹಾಗೂ ಸಂವಾದವನ್ನು ಮತ್ತಷ್ಟು ಬಲಪಡಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ.

32 ಸಂಘಟನೆಗಳ ಪ್ರಮುಖರು ಭಾಗಿ

ಈ ಬಾರಿಯ ಸಭೆಯಲ್ಲಿ ಆರ್‌ಎಸ್‌ಎಸ್‌ ಪ್ರೇರಿತ ಒಟ್ಟು 32 ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಆಯಾ ಸಂಘಟನೆಗಳ ಅಖಿಲ ಭಾರತ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಸಚಿವರು ಹಾಗೂ ಆಯ್ದ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕ ಕ್ಷೇತ್ರದಲ್ಲಿನ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು, ರಾಷ್ಟ್ರಹಿತದ ವಿಚಾರಗಳಲ್ಲಿ ಸಮಾಜವನ್ನು ಸಜ್ಜುಗೊಳಿಸುವುದು ಹಾಗೂ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆ ಮತ್ತು ಬದಲಾವಣೆ ತರಲು ದೀರ್ಘಕಾಲೀನ ಕಾರ್ಯದಲ್ಲಿ ತೊಡಗಿವೆ.

ವಿವಿಧ ವಿಷಯಗಳ ಕುರಿತು ಚರ್ಚೆ

ಸಭೆಯಲ್ಲಿ ಭಾಗವಹಿಸುವ ಸಂಘಟನೆಗಳ ಪ್ರತಿನಿಧಿಗಳು ತಮ್ಮ ತಮ್ಮ ಸಂಘಟನೆಗಳ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ಅಲ್ಲದೆ, ವಿವಿಧ ಪ್ರಮುಖ ವಿಷಯಗಳ ಕುರಿತು ತಮ್ಮ ಅವಲೋಕನ, ಅನುಭವ ಹಾಗೂ ಸಲಹೆಗಳನ್ನು ಮಂಡಿಸಲಿದ್ದಾರೆ.

ಎಲ್ಲ ಸಂಘಟನೆಗಳ ನಡುವೆ ಪರಸ್ಪರ ಸಮನ್ವಯ ಮತ್ತು ಸಹಕಾರವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವುದು, ಜನಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ಸಂವಾದ ನಡೆಸುವುದು ಸಭೆಯ ಪ್ರಮುಖ ಅಜೆಂಡಾವಾಗಿದೆ.

ಪ್ರಸ್ತುತ ದೇಶ ಎದುರಿಸುತ್ತಿರುವ ವಿವಿಧ ಸಾಮಾಜಿಕ ಮತ್ತು ರಾಷ್ಟ್ರೀಯ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಸುವ ನಿರೀಕ್ಷೆಯೂ ಇದೆ.

ಜನಸಂಖ್ಯಾ ಅಸಮತೋಲನದಿಂದ ಯುವಜನರ ಜಾಗೃತಿವರೆಗೆ

ಸಭೆಯಲ್ಲಿ ಜನಸಂಖ್ಯಾ ಅಸಮತೋಲನ, ವ್ಯಸನಮುಕ್ತಿ, ಯುವಜನರಲ್ಲಿ ಜಾಗೃತಿ, ‘ಪಂಚ ಪರಿವರ್ತನೆ’ ಅನುಷ್ಠಾನ ಹಾಗೂ ಅಭಿವೃದ್ಧಿಯ ಭಾರತೀಯ ಪರಿಕಲ್ಪನೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ.

ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಕೈಗೊಂಡಿರುವ ಕಾರ್ಯಗಳ ಅನುಭವಗಳನ್ನು ಹಂಚಿಕೊಳ್ಳುವುದು ಹಾಗೂ ಮುಂದಿನ ದಿನಗಳಲ್ಲಿ ಪರಸ್ಪರ ಸಹಕಾರದೊಂದಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹ ಸರಕಾರ್ಯವಾಹರು ಹಾಗೂ ಅಖಿಲ ಭಾರತ ಕಾರ್ಯವಿಭಾಗ ಪ್ರಮುಖರು ಭಾಗವಹಿಸಲಿದ್ದಾರೆ.

ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಭಾರತೀಯ ಜನತಾ ಪಕ್ಷ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಕ್ಷಮ್, ರಾಷ್ಟ್ರ ಸೇವಿಕಾ ಸಮಿತಿ ಸೇರಿದಂತೆ ಸಂಘ ಪ್ರೇರಿತ ಒಟ್ಟು 32 ಸಂಘಟನೆಗಳ ಪ್ರಮುಖ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಕಾರ್ಯಗಳ ಪರಸ್ಪರ ವಿನಿಮಯ, ಸಮನ್ವಯವನ್ನು ಮತ್ತಷ್ಟು ಬಲಪಡಿಸುವುದು ಮತ್ತು ರಾಷ್ಟ್ರ ಹಾಗೂ ಸಮಾಜದ ಪ್ರಮುಖ ವಿಚಾರಗಳ ಕುರಿತು ಒಟ್ಟಾಗಿ ಚಿಂತನೆ ನಡೆಸುವುದು ಈ ಸಭೆಯ ವಿಶೇಷತೆಯಾಗಲಿದೆ ಸುನಿಲ್ ಅಂಬೇಕರ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande