
ನವದೆಹಲಿ, 10 ಆಗಸ್ಟ್ (ಹಿ.ಸ.):
ಆ್ಯಂಕರ್:
ಸಂಸತ್ ಸಮೀಪ ಜುಲೈ 20ರಂದು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮಕ್ಕೆ ಕೇಂದ್ರ ಸರ್ಕಾರ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ರಾಹುಲ್ ಗಾಂಧಿ, ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಲಾಠಿ ಹಾಗೂ ಪೆಲೆಟ್ ಗನ್ ಬಳಕೆಗೆ ಯಾರು ಆದೇಶ ನೀಡಿದರು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಆಗಮಿಸಿದ್ದ ಯುವಕರು ನ್ಯಾಯಸಮ್ಮತ ಶಿಕ್ಷಣ ವ್ಯವಸ್ಥೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಹೊಣೆಗಾರಿಕೆ ನಿಗದಿಪಡಿಸುವಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಸರ್ಕಾರ ಯುವಕರ ಧ್ವನಿ ಹತ್ತಿಕ್ಕಲು ಬಲಪ್ರಯೋಗ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನೆಯ ವೇಳೆ ಗಾಯಗೊಂಡ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಾಬ್ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿರುವ ರಾಹುಲ್ ಗಾಂಧಿ, ಅವರ ದೇಹದ ಮೇಲ್ಭಾಗಕ್ಕೆ ಪೆಲೆಟ್‌ಗಳ ಗಾಯವಾಗಿದ್ದು, ಒಂದು ಪೆಲೆಟ್ ಕಣ್ಣಿಗೆ ತಗುಲಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳಿದ್ದಾರೆ. ಬಿಹಾರದ ಅರರಿಯಾ, ಸಿವಾನ್ ಸೇರಿದಂತೆ ವಿವಿಧೆಡೆ ಪ್ರತಿಭಟನಾಕಾರರು ಗಾಯಗೊಂಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಸಂಸತ್ತಿನಿಂದ ಸುಮಾರು 500 ಮೀಟರ್ ದೂರದಲ್ಲಿ ನಡೆದ ಪೊಲೀಸ್ ಕ್ರಮಕ್ಕೆ ಯಾರು ಅನುಮತಿ ನೀಡಿದರು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ದೆಹಲಿ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಪಡೆ ಸೇರಿದಂತೆ ಭದ್ರತಾ ಪಡೆಗಳು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವುದರಿಂದ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಕ್ರಮದ ಮಾಹಿತಿ ಇತ್ತೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಕ್ರಮಕ್ಕೆ ಗೃಹ ಸಚಿವರು ಅನುಮತಿ ನೀಡಿದ್ದರೆ ಅದರ ಹೊಣೆಗಾರಿಕೆ ಅವರದ್ದಾಗುತ್ತದೆ. ಮಾಹಿತಿ ಇಲ್ಲದಿದ್ದರೆ ಅದು ಗಂಭೀರ ಆಡಳಿತಾತ್ಮಕ ವೈಫಲ್ಯ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸದ ಹಾಗೂ ಸಂಸತ್ತಿನಲ್ಲಿ ಹೇಳಿಕೆ ನೀಡದ ಸರ್ಕಾರದ ವಿರುದ್ಧವೂ ಅವರು ಪ್ರಶ್ನೆ ಎತ್ತಿದ್ದಾರೆ.
ವಿದ್ಯಾರ್ಥಿಗಳ ಅಹವಾಲುಗಳು ಹಾಗೂ ಅವರ ಮೇಲಿನ ಕ್ರಮದ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯರು ಮತ್ತು ಅವರ ಪೋಷಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರಿಯಾಗಿಸಲಾಗುತ್ತಿದೆ ಎಂದೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೇಶದ ಯುವಕರ ಪ್ರಶ್ನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.