
ನವದೆಹಲಿ, 10 ಆಗಸ್ಟ್ (ಹಿ.ಸ.):
ಆ್ಯಂಕರ್:
ಭಾರಿ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಸೋಮವಾರ ನ್ಯಾಯಮಂಡಳಿ ಸುಧಾರಣಾ ವಿಧೇಯಕ-2026 ಅಂಗೀಕಾರಗೊಂಡಿತು. ವಿವಿಧ ನ್ಯಾಯಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಮತ್ತು ಸೇವಾ ಷರತ್ತುಗಳಿಗೆ ಏಕರೂಪದ ವ್ಯವಸ್ಥೆ ಕಲ್ಪಿಸುವುದು ಹಾಗೂ ರಾಷ್ಟ್ರೀಯ ನ್ಯಾಯಮಂಡಳಿ ಆಯೋಗ ರಚಿಸುವುದು ವಿಧೇಯಕದ ಪ್ರಮುಖ ಉದ್ದೇಶವಾಗಿದೆ.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ವಿಧೇಯಕವನ್ನು ಮಂಡಿಸಿದರು. 2021ರಲ್ಲಿ ಜಾರಿಗೆ ತಂದಿದ್ದ ಕಾನೂನಿನಲ್ಲಿ ನ್ಯಾಯಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ, ನೇಮಕಾತಿ ಹಾಗೂ ಸೇವಾ ಷರತ್ತುಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಅದರ ಕೆಲವು ಅಂಶಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ನಿಯಮಗಳು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸರ್ಕಾರದ ಅಧಿಕಾರ ವಿಭಜನೆಯ ತತ್ವಗಳಿಗೆ ವಿರುದ್ಧವಾಗಿವೆ ಎಂದು ನ್ಯಾಯಾಲಯ ಹೇಳಿತ್ತು.
ನ್ಯಾಯಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಸ್ವತಂತ್ರ, ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿಸಲು ರಾಷ್ಟ್ರೀಯ ನ್ಯಾಯಮಂಡಳಿ ಆಯೋಗ ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದರ ಹಿನ್ನೆಲೆಯಲ್ಲಿ 2021ರ ಕಾನೂನನ್ನು ರದ್ದುಪಡಿಸಿ ಹೊಸ ನ್ಯಾಯಮಂಡಳಿ ಸುಧಾರಣಾ ವಿಧೇಯಕ-2026 ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಹೊಸ ವಿಧೇಯಕದಲ್ಲಿ ರಾಷ್ಟ್ರೀಯ ನ್ಯಾಯಮಂಡಳಿ ಆಯೋಗದ ರಚನೆ, ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆ, ಆಯ್ಕೆ, ನೇಮಕಾತಿ, ವೇತನ, ಸೇವಾ ಷರತ್ತುಗಳು ಹಾಗೂ ಪದಚ್ಯುತಿ ಪ್ರಕ್ರಿಯೆ ಸೇರಿದಂತೆ ಹಲವು ಅಂಶಗಳನ್ನು ನಿಗದಿಪಡಿಸಲಾಗಿದೆ.
2015ರಿಂದ ನ್ಯಾಯಮಂಡಳಿಗಳ ವ್ಯವಸ್ಥೆಯನ್ನು ಸರಳಗೊಳಿಸುವ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಸುಧಾರಣೆಗಳನ್ನು ಕೈಗೊಂಡಿತ್ತು. 2017ರಲ್ಲಿ ಕೆಲವು ನ್ಯಾಯಮಂಡಳಿಗಳನ್ನು ರದ್ದುಪಡಿಸಿ, ಕೆಲವು ನ್ಯಾಯಮಂಡಳಿಗಳನ್ನು ವಿಲೀನಗೊಳಿಸಲಾಗಿತ್ತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.