
ನವದೆಹಲಿ, 10 ಆಗಸ್ಟ್ (ಹಿ.ಸ.):
ಆ್ಯಂಕರ್:ದೆಹಲಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ್ದಾರೆ ಎನ್ನಲಾದ ಬಲಪ್ರಯೋಗದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಲೋಕಸಭೆಗೆ ಕರೆಸಿ ಸಮಗ್ರ ಹೇಳಿಕೆ ನೀಡುವಂತೆ ನಿರ್ದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣದ ಕುರಿತು ತಕ್ಷಣ ಸಂಸದೀಯ ತನಿಖೆ ನಡೆಸಿ, ಗೃಹ ಸಚಿವರ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ. ಪೆಲೆಟ್ ಗನ್ ಬಳಕೆಯ ಆರೋಪವೂ ಕೇಳಿಬಂದಿರುವುದು ಗಂಭೀರ ವಿಚಾರ ಎಂದು ವೇಣುಗೋಪಾಲ್ ಹೇಳಿದ್ದಾರೆ.
ದೆಹಲಿ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವುದರಿಂದ ಪೊಲೀಸ್ ಕ್ರಮದ ಅಂತಿಮ ಹೊಣೆಗಾರಿಕೆ ಗೃಹ ಸಚಿವರದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಗೃಹ ಸಚಿವರು ಲೋಕಸಭೆಯಲ್ಲಿ ಹಾಜರಾಗಿ ಪೊಲೀಸ್ ಕ್ರಮ ಹಾಗೂ ಪೆಲೆಟ್ ಗನ್ ಬಳಕೆಯ ಕುರಿತು ವಿವರವಾದ ಹೇಳಿಕೆ ನೀಡುವುದರ ಜೊತೆಗೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗಂಭೀರ ಪ್ರಕರಣದಲ್ಲಿ ಗೃಹ ಸಚಿವರು ಸ್ವಯಂಪ್ರೇರಿತವಾಗಿ ಸದನಕ್ಕೆ ಹಾಜರಾಗದಿದ್ದರೆ, ಸಂಸದೀಯ ಹೊಣೆಗಾರಿಕೆಯ ತತ್ವವನ್ನು ಎತ್ತಿಹಿಡಿಯಲು ಸ್ಪೀಕರ್ ತಮ್ಮ ಅಧಿಕಾರ ಬಳಸಿಕೊಂಡು ಅವರನ್ನು ಸದನಕ್ಕೆ ಕರೆಸಬೇಕು ಎಂದು ವೇಣುಗೋಪಾಲ್ ಮನವಿ ಮಾಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.