
ನವದೆಹಲಿ, 09 ಜುಲೈ (ಹಿ.ಸ.):
ಆ್ಯಂಕರ್:
ಭಾರತದ ಶುದ್ಧ ಇಂಧನ ಪರಿವರ್ತನೆ ವೇಗ ಪಡೆದುಕೊಳ್ಳುತ್ತಿದ್ದು, ಒಂದೇ ವರ್ಷದಲ್ಲಿ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 297 ಗಿ.ವ್ಯಾಗೆ ಏರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನವೀಕರಿಸಬಹುದಾದ ಇಂಧನದಲ್ಲಿ ಭಾರತ ಜಾಗತಿಕವಾಗಿ ಅಗ್ರ ಪಂಕ್ತಿಯಲ್ಲಿದ್ದು, ಇದೀಗ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 297.36 ಗಿ.ವ್ಯಾಗೆ ಹೆಚ್ಚಿಸಿಕೊಂಡಿದೆ. ಕಳೆದ ವರ್ಷ ಜೂನ್ ನಲ್ಲಿ 242.78 ಗಿ.ವ್ಯಾ ಇದ್ದದ್ದು, 2026ರ ಜೂನ್ ವೇಳೆಗೆ 55 ಗಿ.ವ್ಯಾ ಉತ್ಪಾದನಾ ಸಾಮರ್ಥ್ಯ ವೃದ್ಧಿಸಿದೆ ಎಂದು ಹೇಳಿದ್ದಾರೆ.
ಸ್ಥಾಪಿತ ಸೌರಶಕ್ತಿ ಸಾಮರ್ಥ್ಯದಲ್ಲೂ ಭಾರತ ಮಹತ್ವದ ಸಾಧನೆಗೈಯುತ್ತಿದೆ. ಒಂದೇ ವರ್ಷದಲ್ಲಿ 162.15 ಗಿ.ವ್ಯಾ ದಾಖಲಿಸಿದೆ. ಪಿಎಂ ಸೂರ್ಯಘರ್, ಪಿಎಂ ಕುಸುಮ್ ಯೋಜನೆ ಸೇರಿದಂತೆ ಸೌರಶಕ್ತಿ ಉತ್ಪಾದನೆಯಲ್ಲಿ ಮಹತ್ವದ ಮೈಲುಗಲ್ಲಿರಿಸಿದೆ. 2025-26ರ ಜೂನ್ ನಡುವಿನ ಒಂದೇ ವರ್ಷದಲ್ಲಿ 46 ಗಿ.ವ್ಯಾಗೂ ಅಧಿಕ ಹೆಚ್ಚಳ ಕಂಡಿದೆ ಎಂದಿದ್ದಾರೆ.
2025ರ ಜೂನ್ ವೇಳೆಗೆ 116.25 ಗಿ.ವ್ಯಾ ಇದ್ದ ಸೌರಶಕ್ತಿ ಸಾಮರ್ಥ್ಯ ಇದೀಗ 162 ಗಿ.ವ್ಯಾ ದಾಟಿದೆ. ಅಂತೆಯೇ ಪವನ ವಿದ್ಯುತ್ ಸಾಮರ್ಥ್ಯವೂ ಅಧಿಕಗೊಂಡಿದೆ. 57.44 ಗಿ.ವ್ಯಾ ಗೆ ಹೆಚ್ಚಿದೆ. ಈ ಎಲ್ಲಾ ಮೂಲಗಳಿಂದ ಭಾರತದ ಶುದ್ಧ ಇಂಧನ ಪರಿವರ್ತನೆಯು ಅಭೂತಪೂರ್ವ ವೇಗ ಪಡೆಯುತ್ತಿದೆ ಎಂದು ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ಸಮರ್ಥ ನಾಯಕತ್ವದಲ್ಲಿ ಮುನ್ನಡೆಗಿರುವ ಭಾರತ ಇಂಧನ ವಲಯದಲ್ಲೂ ಆತ್ಮನಿರ್ಭರವಾಗುವತ್ತ ದೃಢ ಹೆಜ್ಜೆಯಿರಿಸಿದೆ. ಮುಂದಿನ ಪೀಳಿಗೆಗೆ ಹಸಿರು ಮತ್ತು ಸುಸ್ಥಿರ, ಸುಭದ್ರ ಭಾರತವನ್ನು ಕೊಡಮಾಡಲಿದ್ದಾರೆ ಎಂದು ಜೋಶಿ ಪ್ರತಿಪಾದಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.