
ನವದೆಹಲಿ, 09 ಜುಲೈ (ಹಿ.ಸ.):
ಆ್ಯಂಕರ್:
ದೆಹಲಿಯ ರೋಹಿಣಿ ಸೆಕ್ಟರ್-16ರಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ನಾಲ್ಕು ಮಹಡಿ ಕಟ್ಟಡ ಬುಧವಾರ ಸಂಜೆ ಏಕಾಏಕಿ ಕುಸಿದು ಮೂವರು ಮೃತಪಟ್ಟಿದ್ದು, ಹಲವು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಒಬ್ಬ ಕಾರ್ಮಿಕನನ್ನು ಜೀವಂತವಾಗಿ ರಕ್ಷಿಸಲಾಗಿದೆ.
ಸಂಜೆ ಸುಮಾರು 4.28ಕ್ಕೆ ಕಟ್ಟಡ ಕುಸಿದ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳಡಿ ಸಿಲುಕಿದ್ದ 34 ವರ್ಷದ ಸದ್ದಾಂ ಎಂಬ ಕಾರ್ಮಿಕನನ್ನು ಜೀವಂತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವಶೇಷಗಳಿಂದ 42 ವರ್ಷದ ರಾಮ್, 20 ವರ್ಷದ ನೂರೂಲ್ ಹುದಾ ಹಾಗೂ 51 ವರ್ಷದ ರಾಮ್ ದುವಾ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಮೂವರನ್ನೂ ಮೃತಪಟ್ಟಿರುವುದಾಗಿ ಘೋಷಿಸಿದರು.
ಕಟ್ಟಡ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದು, ಕುಸಿತ ಸಂಭವಿಸಿದ ವೇಳೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ಕಾಮಗಾರಿಗಳು ನಡೆಯುತ್ತಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಟ್ಟಡ ನಿರ್ಮಾಣದ ಗುಣಮಟ್ಟ, ಸುರಕ್ಷತಾ ನಿಯಮಗಳ ಪಾಲನೆ ಹಾಗೂ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.