
ನವದೆಹಲಿ, 08 ಜುಲೈ (ಹಿ.ಸ.):
ಆ್ಯಂಕರ್:
ಭಾರತೀಯ ಜನತಾ ಪಕ್ಷದ ಪಂಡಿತ್ ದೀನದಯಾಳ ಉಪಾಧ್ಯಾಯ ತರಬೇತಿ ಮಹಾಭಿಯಾನದಡಿ ನಡೆಯುತ್ತಿರುವ ಡಿಜಿಟಲ್ ತರಬೇತಿ ಅಭಿಯಾನವು 11 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ತಲುಪಿದ್ದು, ಇದೀಗ ಪ್ರತಿಯೊಂದು ಬೂತ್ ಮಟ್ಟದ ಕಾರ್ಯಕರ್ತರಿಗೂ ಈ ತರಬೇತಿಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ತರುಣ್ ಚುಗ್ ತಿಳಿಸಿದ್ದಾರೆ.
ಬುಧವಾರ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, ದೇಶಾದ್ಯಂತ ಇದುವರೆಗೆ 11,01,618 ಕಾರ್ಯಕರ್ತರು ಆ್ಯಪ್ ಆಧಾರಿತ ಡಿಜಿಟಲ್ ಕಲಿಕಾ ವೇದಿಕೆಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. 12 ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿ, ವೀಡಿಯೊ ಪಾಠಗಳು, ಪ್ರಶ್ನೋತ್ತರ ಹಾಗೂ ಡಿಜಿಟಲ್ ಪ್ರಮಾಣಪತ್ರದ ವ್ಯವಸ್ಥೆಯನ್ನು ಈ ವೇದಿಕೆ ಒಳಗೊಂಡಿದೆ ಎಂದು ವಿವರಿಸಿದರು.
ತರಬೇತಿಯಲ್ಲಿ ಬಿಜೆಪಿಯ ಪರಿಚಯ, ಪಕ್ಷದ ಇತಿಹಾಸ, ಪಂಚ ನಿಷ್ಠೆ, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ವಿಚಾರಗಳು, ಕೇಂದ್ರ ಸರ್ಕಾರದ ಯೋಜನೆಗಳು, ನಮೋ ಆ್ಯಪ್ ಹಾಗೂ 'ಮನ ಕಿ ಬಾತ್' ಸೇರಿದಂತೆ ಸಂಘಟನೆಯ ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಿವ ಪ್ರಕಾಶ್ ಅವರು 2026ರ ಏಪ್ರಿಲ್ 6ರಂದು ಬಿಜೆಪಿ ಸ್ಥಾಪನಾ ದಿನದಂದು ಡಿಜಿಟಲ್ ಲರ್ನಿಂಗ್ ಪ್ಲಾಟ್‌ಫಾರ್ಮ್‌ಗೆ ಚಾಲನೆ ನೀಡಿದ್ದರು ಎಂದು ಹೇಳಿದರು.
ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಬಲಿದಾನ ದಿನವಾದ ಜೂನ್ 23ರಿಂದ ಜುಲೈ 6ರವರೆಗೆ 10 ಲಕ್ಷ ಕಾರ್ಯಕರ್ತರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿತ್ತು. ಆ ಗುರಿಯನ್ನು ಮೀರಿಸಿ 11 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಯಾಗಿದ್ದು, ಇದೀಗ ಅಭಿಯಾನವನ್ನು ಬೂತ್ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದಿಂದ ಪ್ರೇರಣೆ ಪಡೆದು ಈ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ. ಇದು ಸುಶಾಸನದ ಸಂದೇಶವನ್ನು ಕೊನೆಯ ವ್ಯಕ್ತಿವರೆಗೂ ತಲುಪಿಸಲು ನೆರವಾಗಲಿದೆ ಎಂದು ತರುಣ್ ಚುಗ್ ಹೇಳಿದರು.
ರಾಜ್ಯವಾರು ಸಾಧನೆಯಲ್ಲಿ ಮಧ್ಯ ಪ್ರದೇಶ 1,83,113 ಕಾರ್ಯಕರ್ತರೊಂದಿಗೆ ಮೊದಲ ಸ್ಥಾನದಲ್ಲಿದೆ. ತ್ರಿಪುರಾದಲ್ಲಿ ಪ್ರತಿ ಬೂತ್‌ಗೆ ಸರಾಸರಿ 20 ಕಾರ್ಯಕರ್ತರು ತರಬೇತಿ ಪಡೆದಿದ್ದು, ಶೇ.85 ಪೂರ್ಣತಾ ಪ್ರಮಾಣ ದಾಖಲಾಗಿದೆ. ಅರುಣಾಚಲ ಪ್ರದೇಶ ಮತ್ತು ಚಂಡೀಗಢದಲ್ಲಿ ಪ್ರತಿ ಬೂತ್‌ಗೆ ಐದಕ್ಕಿಂತ ಹೆಚ್ಚು ಕಾರ್ಯಕರ್ತರ ಭಾಗವಹಿಸುವಿಕೆ ಕಂಡುಬಂದಿದೆ. ಛತ್ತೀಸ್‌ಗಢ (ಶೇ.90), ಅರುಣಾಚಲ ಪ್ರದೇಶ (ಶೇ.89), ಮಧ್ಯ ಪ್ರದೇಶ (ಶೇ.87), ತ್ರಿಪುರಾ (ಶೇ.85), ಹಿಮಾಚಲ ಪ್ರದೇಶ (ಶೇ.85), ನಾಗಾಲ್ಯಾಂಡ್ (ಶೇ.83) ಹಾಗೂ ಲಡಾಖ್ (ಶೇ.83) ರಾಜ್ಯಗಳು ಶೇ.80ಕ್ಕಿಂತ ಹೆಚ್ಚು ಪೂರ್ಣತಾ ಪ್ರಮಾಣ ದಾಖಲಿಸಿವೆ.
ಶೀಘ್ರದಲ್ಲೇ ಪ್ರತಿಯೊಂದು ಬೂತ್‌ನಲ್ಲಿ ಕನಿಷ್ಠ ಹತ್ತು ಡಿಜಿಟಲ್ ತರಬೇತಿ ಪಡೆದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಗುರಿಯೊಂದಿಗೆ ಅಭಿಯಾನ ಮುಂದುವರಿಯುತ್ತಿದೆ ಎಂದು ತರುಣ್ ಚುಗ್ ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.