ಶೋಪಿಯಾನ್ ಎನ್ಕೌಂಟರ್ನಲ್ಲಿ ಲಷ್ಕರ್ನ ಉಗ್ರ ಕಮಾಂಡರ್ ಜಾಕಿರ್ ಗನಿ ಹತ್ಯೆ
ಶ್ರೀನಗರ, 08 ಜುಲೈ (ಹಿ.ಸ.): ಆ್ಯಂಕರ್: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚನಾಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಜಾಕಿರ್ ಗನಿ ಹತನಾಗಿದ್ದಾನೆ. ಇನ್ನೋರ್ವ ಉಗ್ರ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ
ಶೋಪಿಯಾನ್ ಎನ್ಕೌಂಟರ್ನಲ್ಲಿ ಲಷ್ಕರ್ನ ಉಗ್ರ ಕಮಾಂಡರ್ ಜಾಕಿರ್ ಗನಿ ಹತ್ಯೆ


ಶ್ರೀನಗರ, 08 ಜುಲೈ (ಹಿ.ಸ.):

ಆ್ಯಂಕರ್:

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚನಾಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಜಾಕಿರ್ ಗನಿ ಹತನಾಗಿದ್ದಾನೆ. ಇನ್ನೋರ್ವ ಉಗ್ರ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಜಮ್ಮು-ಕಾಶ್ಮೀರ ಪೊಲೀಸರು ನೀಡಿದ ಮಾಹಿತಿಯಂತೆ, ಜಾಕಿರ್ ಗನಿ ಕಳೆದ ಐದು ದಿನಗಳಿಂದ ತನ್ನ ಸಹಚರನೊಂದಿಗೆ ಭದ್ರತಾ ಪಡೆಗಳ ಸುತ್ತುವರಿಕೆಯಲ್ಲಿ ಸಿಲುಕಿಕೊಂಡಿದ್ದ. ಬುಧವಾರ ಆತನ ಮೃತದೇಹವನ್ನು ಗೋಶಾಲೆಯೊಂದರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದ ಸಮೀಪ ಮತ್ತೆ ಗುಂಡಿನ ಸದ್ದು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮತ್ತೊಬ್ಬ ಉಗ್ರ ಅಲ್ಲೇ ಅಡಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಜಮ್ಮು-ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “ನೀವು ಓಡಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಶೋಪಿಯಾನ್ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ), ಸೇನೆಯ ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾದ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಅಡಗಿರುವ ಮತ್ತೊಬ್ಬ ಉಗ್ರನನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande