
ನವದೆಹಲಿ, 08 ಜುಲೈ (ಹಿ.ಸ.):
ಆ್ಯಂಕರ್:
ದೇಶಕ್ಕೆ ಔಷಧಗಳ ಆಮದು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1945ರ ಔಷಧ ನಿಯಮಾವಳಿಯ ನಿಯಮ 43ಎಗೆ ತಿದ್ದುಪಡಿ ಮಾಡಿ, ನವಿ ಮುಂಬೈ ವಿಮಾನ ನಿಲ್ದಾಣವನ್ನು ಔಷಧಗಳ ಆಮದುಗೆ ಅಧಿಕೃತ ಪ್ರವೇಶ ಕೇಂದ್ರವಾಗಿ ಅಧಿಸೂಚಿಸಿದೆ.
ಈ ನಿರ್ಧಾರದಿಂದ ದೇಶದಲ್ಲಿ ರಸ್ತೆ, ರೈಲು, ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಔಷಧ ಆಮದುಗೆ ಅಧಿಸೂಚಿತ ಪ್ರವೇಶ ಕೇಂದ್ರಗಳ ಒಟ್ಟು ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಸಚಿವಾಲಯದ ಪ್ರಕಟಣೆಯ ಪ್ರಕಾರ, 1940ರ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯಡಿ ಕಾರ್ಯನಿರ್ವಹಿಸುವ ಔಷಧ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ತಿದ್ದುಪಡಿಯನ್ನು ಜಾರಿಗೊಳಿಸಲಾಗಿದೆ.
ನವಿ ಮುಂಬೈ ವಿಮಾನ ನಿಲ್ದಾಣವನ್ನು ಅಧಿಕೃತ ಆಮದು ಕೇಂದ್ರವಾಗಿ ಸೇರಿಸಿರುವುದರಿಂದ ಔಷಧ ಪೂರೈಕೆ ಸರಪಳಿ ಮತ್ತಷ್ಟು ಬಲಗೊಳ್ಳಲಿದೆ. ಔಷಧೀಯ ಉತ್ಪನ್ನಗಳ ಆಮದು ಪ್ರಕ್ರಿಯೆ ವೇಗಗೊಳ್ಳುವುದರ ಜೊತೆಗೆ ಆಮದುದಾರರಿಗೆ ಹೆಚ್ಚುವರಿ ಆಯ್ಕೆ ದೊರೆಯಲಿದೆ. ಇದರಿಂದ ಸರಕು ಸಾಗಣೆ ವ್ಯವಸ್ಥೆ ಸುಧಾರಿಸಿ, ವ್ಯಾಪಾರ ಸುಗಮತೆಗೆ ಉತ್ತೇಜನ ಸಿಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.