
ನವದೆಹಲಿ, 08 ಜುಲೈ (ಹಿ.ಸ.):
ಆ್ಯಂಕರ್:
ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯ, ಭದ್ರತೆ ಹಾಗೂ ವಲಸೆ ವ್ಯವಸ್ಥೆಯನ್ನು ಮತ್ತಷ್ಟು ಆಧುನಿಕ ಮತ್ತು ಸುಗಮಗೊಳಿಸುವ ಉದ್ದೇಶದಿಂದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು ಕಿಂಜರಾಪು ಬುಧವಾರ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ದಳ (ಐಬಿ) ನಿರ್ದೇಶಕರು, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಹಾನಿರ್ದೇಶಕರು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸ್ವಯಂಚಾಲಿತ ಎಕ್ಸ್-ರೇ ಟ್ರೇ ರಿಟರ್ನ್ ವ್ಯವಸ್ಥೆ (ಎಟಿಆರ್‌ಎಸ್)ಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಅಮಿತ್ ಶಾ ಸೂಚನೆ ನೀಡಿದರು. ಇದರಿಂದ ಭದ್ರತಾ ತಪಾಸಣೆ ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವುದರ ಜೊತೆಗೆ ಮಾನವ ಸಂಪನ್ಮೂಲದ ಅವಶ್ಯಕತೆಯೂ ಕಡಿಮೆಯಾಗಲಿದೆ ಎಂದು ತಿಳಿಸಿದರು. ಹೊಸ ವಿಮಾನ ನಿಲ್ದಾಣಗಳಲ್ಲಿಯೂ ಈ ವ್ಯವಸ್ಥೆ ಅಳವಡಿಸಲು ಸೂಕ್ತ ಮಾನದಂಡಗಳನ್ನು ರೂಪಿಸುವಂತೆ ಸೂಚಿಸಿದರು.
ವಿಮಾನ ನಿಲ್ದಾಣಗಳ ಪ್ರವೇಶ ದ್ವಾರ, ಚೆಕ್-ಇನ್ ಕೌಂಟರ್, ಭದ್ರತಾ ತಪಾಸಣಾ ಮಾರ್ಗ ಮತ್ತು ವಲಸೆ ತಪಾಸಣಾ ಕೌಂಟರ್ ಸೇರಿದಂತೆ ಎಲ್ಲಾ ಹಂತಗಳನ್ನು ಏಕೀಕೃತ ವ್ಯವಸ್ಥೆಯಡಿ ತರಬೇಕು. ಇದರಿಂದ ಯಾವುದೇ ಹಂತದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬಹುದು ಎಂದು ಅಮಿತ್ ಶಾ ಹೇಳಿದರು.
ನಿರ್ಮಾಣ ಹಂತದಲ್ಲಿರುವ 21 ವಿಮಾನ ನಿಲ್ದಾಣಗಳು ಹಾಗೂ ಅಭಿವೃದ್ಧಿಗೆ ಗುರುತಿಸಲಾದ 41 ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಆದ್ಯತೆ ನೀಡಬೇಕು. ಒಟ್ಟು 62 ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಭದ್ರತಾ ಮಾನದಂಡಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಪ್ರಯಾಣಿಕರ ಹಾಗೂ ವಿಮಾನಗಳ ಸಂಚಾರದ ಆಧಾರದ ಮೇಲೆ ಪ್ರತಿ ವಿಮಾನ ನಿಲ್ದಾಣದಲ್ಲಿ ಅಗತ್ಯವಿರುವ ಏರೋಬ್ರಿಡ್ಜ್‌ಗಳ ಸಂಖ್ಯೆಯನ್ನು ನಿಗದಿಪಡಿಸುವ ಮಾನದಂಡಗಳನ್ನು ರೂಪಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದರು. ಪ್ರಸ್ತುತ 16 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಬ್ಯಾಗೇಜ್ ಡ್ರಾಪ್ ಸೌಲಭ್ಯವನ್ನು ಹೆಚ್ಚಿನ ಪ್ರಯಾಣಿಕರಿರುವ ಇತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲು ಸೂಚಿಸಿದರು.
ಎಕ್ಸ್-ರೇ ತಪಾಸಣೆಯಲ್ಲಿ ಕಾರ್ಯನಿರ್ವಹಿಸುವ ಸಿಐಎಸ್‌ಎಫ್ ಸಿಬ್ಬಂದಿಯ ಶೈಕ್ಷಣಿಕ ಅರ್ಹತಾ ಮಾನದಂಡಗಳಲ್ಲಿ ಯಾವುದೇ ಸಡಿಲಿಕೆ ನೀಡಬಾರದು. ಅಗತ್ಯ ಅರ್ಹತೆ ಹೊಂದಿರುವ ಸಿಬ್ಬಂದಿಯನ್ನೇ ಈ ಕಾರ್ಯಕ್ಕೆ ನಿಯೋಜಿಸಬೇಕು ಎಂದು ಅಮಿತ್ ಶಾ ಸೂಚಿಸಿದರು.
2027ರೊಳಗೆ ದೇಶದ ಎಲ್ಲ ರಾಜ್ಯ ರಾಜಧಾನಿಗಳಲ್ಲಿ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿದರು. ಜೊತೆಗೆ ಅಗರ್ತಲಾ ಹಾಗೂ ಜೆವಾರ್ ವಿಮಾನ ನಿಲ್ದಾಣಗಳಲ್ಲಿ ಅಧಿಕೃತ ವಲಸೆ ತಪಾಸಣಾ ಕೇಂದ್ರಗಳನ್ನು ಶೀಘ್ರ ಆರಂಭಿಸುವಂತೆ ಸೂಚಿಸಿದರು.
ಫಾಸ್ಟ್ ಟ್ರ್ಯಾಕ್ ಇಮಿಗ್ರೇಶನ್–ಟ್ರಸ್ಟೆಡ್ ಟ್ರಾವೆಲರ್ಸ್ ಪ್ರೋಗ್ರಾಂ (ಎಫ್‌ಟಿಐ-ಟಿಟಿಪಿ) ಕುರಿತು ಜನರಲ್ಲಿ ಅರಿವು ಮೂಡಿಸಲು ವಿಮಾನಯಾನ ಸಂಸ್ಥೆಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಟಿಕೆಟ್ ಬುಕ್ಕಿಂಗ್ ವೇಳೆ ಪ್ರಯಾಣಿಕರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸುವ ವ್ಯವಸ್ಥೆ ರೂಪಿಸಲು ಸೂಚಿಸಿದರು.
ಇದೇ ವೇಳೆ, ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಸಿಐಎಸ್‌ಎಫ್ ಪ್ರತ್ಯೇಕ ತೃತೀಯ ಪಕ್ಷದ ಸಂಸ್ಥೆಗಳ ಮೂಲಕ ಹೆಚ್ಚು ಪ್ರಯಾಣಿಕರಿರುವ ಅವಧಿಯಲ್ಲಿ ಅಧ್ಯಯನ ನಡೆಸಿ, ಪ್ರಮುಖ ವಿಮಾನ ನಿಲ್ದಾಣಗಳ ವಿವಿಧ ಹಂತಗಳಲ್ಲಿ ಉಂಟಾಗುವ ವಿಳಂಬವನ್ನು ಗುರುತಿಸಿ ಅದನ್ನು ಕಡಿಮೆಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಮಿತ್ ಶಾ ನಿರ್ದೇಶನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.