ಜಮ್ಮು-ಕಾಶ್ಮೀರದಲ್ಲಿ ಭಾರಿ ಭೂಕುಸಿತ
ಡೋಡಾ–ಕಿಶ್ತವಾರ್ ರಾಷ್ಟ್ರೀಯ ಹೆದ್ದಾರಿ ಬಂದ್, ಮಚೈಲ್ ಮಾತಾ ಯಾತ್ರೆ ಸ್ಥಗಿತ
ಮಚೈಲ್ ಮಾತಾ ದೇವಸ್ಥಾನ ಮತ್ತು ಭಕ್ತರ ಪೋಟೋ


ಡೋಡಾ, 06 ಜುಲೈ (ಹಿ.ಸ.):

ಆ್ಯಂಕರ್:

ಜಮ್ಮು ಮತ್ತು ಕಾಶ್ಮೀರದ ಡೋಡಾ–ಕಿಶ್ತವಾರ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಡೋಡಾದ ಪ್ರೇಮ್ ನಗರ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದ ಪರಿಣಾಮ ಹಲವು ವಾಹನಗಳು ಮಣ್ಣಿನಡಿ ಸಿಲುಕಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಡೋಡಾ–ಕಿಶ್ತವಾರ್ ರಾಷ್ಟ್ರೀಯ ಹೆದ್ದಾರಿಯನ್ನು ಆಡಳಿತ ಸಂಪೂರ್ಣವಾಗಿ ಬಂದ್ ಮಾಡಿದೆ.

ನಿರಂತರ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಪ್ರಸಿದ್ಧ ಮಚೈಲ್ ಮಾತಾ ವಾರ್ಷಿಕ ಯಾತ್ರೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಡೋಡಾ ಹಾಗೂ ಕಿಶ್ತವಾರ್ ಜಿಲ್ಲಾಡಳಿತಗಳು ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆ ಹೊರಡಿಸಿದ್ದು, ಅತ್ಯಾವಶ್ಯಕತೆ ಇಲ್ಲದಿದ್ದರೆ ಪ್ರಯಾಣ ಮಾಡದಂತೆ ಮನವಿ ಮಾಡಿವೆ. ಪ್ರವಾಹ, ಹೊಳೆಗಳು ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳಿಂದ ದೂರವಿರುವಂತೆ ಸೂಚಿಸಲಾಗಿದೆ.

ಮಚೈಲ್ ಮಾತಾ ಯಾತ್ರಿಕರು ಪ್ರಯಾಣ ಆರಂಭಿಸುವ ಮೊದಲು ಡೋಡಾ, ಕಿಶ್ತವಾರ್ ಅಥವಾ ಜಮ್ಮುವಿನ ಟ್ರಾಫಿಕ್ ಕಂಟ್ರೋಲ್ ರೂಂನಿಂದ ರಸ್ತೆ ಮತ್ತು ಹವಾಮಾನದ ಮಾಹಿತಿ ಪಡೆದು ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಆಡಳಿತ ಮನವಿ ಮಾಡಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಭೂಕುಸಿತದಿಂದ ಹಾನಿಗೊಳಗಾದ ರಸ್ತೆಯನ್ನು ಪುನಃ ಸಂಚಾರಕ್ಕೆ ಯೋಗ್ಯವಾಗಿಸಲು ತುರ್ತು ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನೇ ನಂಬುವಂತೆ ಆಡಳಿತ ಸಲಹೆ ನೀಡಿದೆ.

ಮಚೈಲ್ ಮಾತಾ ದೇವಸ್ಥಾನವು ದುರ್ಗಾದೇವಿಯ ಪವಿತ್ರ ಕ್ಷೇತ್ರವೆಂದು ಭಕ್ತರು ನಂಬುತ್ತಾರೆ. ಈ ದೇವಾಲಯವು ಕಿಶ್ತವಾರ್ ಜಿಲ್ಲೆಯ ಪದ್ದರ್ ಕಣಿವೆಯ ಮಚೈಲ್ ಗ್ರಾಮದಲ್ಲಿ, ಚಿನಾಬ್ ನದಿಯ ಉಪನದಿಗಳ ಸಮೀಪದಲ್ಲಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿ ಯಾತ್ರೆ ಕೈಗೊಳ್ಳುತ್ತಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande