ಎಐ ಕಣ್ಣು: ಒಂದೇ ವರ್ಷದಲ್ಲಿ ₹10.22 ಕೋಟಿ ಟ್ರಾಫಿಕ್ ದಂಡ ದಾಖಲೆ
ಬಾಗಲಕೋಟೆ, 03 ಜುಲೈ (ಹಿ.ಸ.) ಆ್ಯಂಕರ್ : ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸುತ್ತಿರುವ ಡಿಜಿಟಲ್ ನಿಗಾ ವ್ಯವಸ್ಥೆ ಗಮನಾರ್ಹ ಫಲಿತಾಂಶ ನೀಡಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಅ
ದಂಡ


ಬಾಗಲಕೋಟೆ, 03 ಜುಲೈ (ಹಿ.ಸ.)

ಆ್ಯಂಕರ್ : ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸುತ್ತಿರುವ ಡಿಜಿಟಲ್ ನಿಗಾ ವ್ಯವಸ್ಥೆ ಗಮನಾರ್ಹ ಫಲಿತಾಂಶ ನೀಡಿದೆ.

ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ ₹10.22 ಕೋಟಿ ಮೊತ್ತದ ಸಂಚಾರ ದಂಡ ವಿಧಿಸಲಾಗಿದ್ದು, ಇದು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯಾಗಿದೆ. ಆದರೆ, ವಿಧಿಸಲಾದ ಒಟ್ಟು ದಂಡದಲ್ಲಿ ಕೇವಲ ಶೇ.15ರಷ್ಟು ಮಾತ್ರ ವಸೂಲಿಯಾಗಿರುವುದು ಅಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.

ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಹಾಗೂ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸ್ ಇಲಾಖೆ ಜೂನ್ 2025ರಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಜಾರಿಗೆ ತಂದಿತ್ತು. ಈ ಯೋಜನೆಯಡಿ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ, ಗದ್ದನಕೇರಿ ಕ್ರಾಸ್ ಸೇರಿದಂತೆ ನಗರದ ಪ್ರಮುಖ ಜಂಕ್ಷನ್ಗಳಲ್ಲಿ 22 ಅತ್ಯಾಧುನಿಕ ಎಎನ್ಪಿಆರಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಈ ಕ್ಯಾಮೆರಾಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಗುರುತಿಸಿ, ಹೆಲ್ಮೆಟ್ ಧರಿಸದೇ ಚಾಲನೆ, ಸೀಟ್ ಬೆಲ್ಟ್ ಹಾಕದಿರುವುದು, ತ್ರಿಪಲ್ ರೈಡಿಂಗ್, ಸಿಗ್ನಲ್ ಜಂಪ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚುತ್ತಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ವಿಶೇಷ ನಿಯಂತ್ರಣ ಕೊಠಡಿಯಿಂದ ಸಿಬ್ಬಂದಿ ದಿನದ 24 ಗಂಟೆಯೂ ಈ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜೂನ್ 2025 ರಿಂದ ಜುಲೈ 2026ರವರೆಗೆ ಒಟ್ಟು 2,11,074 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹10,22,97,000 ಮೊತ್ತದ ದಂಡ ವಿಧಿಸಲಾಗಿದೆ. ಆದರೆ ಇದರಲ್ಲಿ ₹1,72,60,000 ಮಾತ್ರ ಸರ್ಕಾರದ ಖಜಾನೆಗೆ ಜಮೆಯಾಗಿದ್ದು, 48,500 ಪ್ರಕರಣಗಳಲ್ಲಿ ಮಾತ್ರ ದಂಡ ಪಾವತಿಯಾಗಿದೆ. ಉಳಿದ ಬಹುಪಾಲು ಪ್ರಕರಣಗಳಲ್ಲಿ ದಂಡ ಇನ್ನೂ ಬಾಕಿಯೇ ಉಳಿದಿದೆ.

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಎಐ ಆಧಾರಿತ ಈ ನಿಗಾ ವ್ಯವಸ್ಥೆ ಜಾರಿಗೆ ಬಂದ ಬಳಿಕ ನಗರದಲ್ಲಿ ರಸ್ತೆ ಅಪಘಾತಗಳು ಹಾಗೂ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇ.20ರಷ್ಟು ಇಳಿಕೆಯಾಗಿದೆ. ಇದರಿಂದ ರಸ್ತೆ ಸುರಕ್ಷತೆ ಹೆಚ್ಚಲು ಹಾಗೂ ಸಂಚಾರ ಶಿಸ್ತು ಮೂಡಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಆದರೆ ಮತ್ತೊಂದೆಡೆ, ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗಿದ್ದರೂ ವಸೂಲಾತಿ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಾಹನ ಸವಾರರ ಮನೆಗಳಿಗೆ ಇ-ಚಲನ್ ನೋಟಿಸ್ಗಳು ತಲುಪುತ್ತಿದ್ದರೂ, ಬಾಕಿ ದಂಡ ವಸೂಲಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.

ಇದೇ ವೇಳೆ, ಸಂಚಾರ ನಿಯಮಗಳ ಹೆಸರಿನಲ್ಲಿ ಸಾಮಾನ್ಯ ವಾಹನ ಸವಾರರು ಹಾಗೂ ರೈತರನ್ನೇ ಹೆಚ್ಚು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳೂ ವ್ಯಕ್ತವಾಗಿವೆ. ಆದ್ದರಿಂದ ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಜೊತೆಗೆ, ಬಾಕಿ ದಂಡ ವಸೂಲಾತಿಯನ್ನು ಪರಿಣಾಮಕಾರಿಯಾಗಿ ನಡೆಸಲು ಹಾಗೂ ಸಿಬ್ಬಂದಿಯ ಕಾರ್ಯವೈಖಾನಿಯ ಮೇಲೂ ಉನ್ನತ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಟ್ಟಾರೆ, ಎಐ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆ ರಸ್ತೆ ಸುರಕ್ಷತೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದರೂ, ದಂಡ ವಸೂಲಾತಿ ಹಾಗೂ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದು ಪೊಲೀಸ್ ಇಲಾಖೆಯ ಮುಂದಿನ ದೊಡ್ಡ ಸವಾಲಾಗಿ ಪರಿಣಮಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande