
ಜಮ್ಮು, 03 ಜುಲೈ (ಹಿ.ಸ.):
ಆ್ಯಂಕರ್:
ವಾರ್ಷಿಕ ಶ್ರೀ ಅಮರನಾಥ ಯಾತ್ರೆಗೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಗುಹಾ ದೇವಾಲಯದತ್ತ ಬಾಲ್ಟಾಲ್ ಹಾಗೂ ನುನ್ವಾನ್ (ಪಹಲ್ಗಾಮ್) ಮೂಲ ಶಿಬಿರಗಳಿಂದ ಮೊದಲ ತಂಡದ ಯಾತ್ರಿಕರು ಹೊರಟಿದ್ದು, ಇದೇ ವೇಳೆ ಜಮ್ಮುವಿನಿಂದ 3,865 ಭಕ್ತರ ಎರಡನೇ ತಂಡವೂ ಬಿಗಿ ಭದ್ರತೆಯ ನಡುವೆ ಕಾಶ್ಮೀರದತ್ತ ಪ್ರಯಾಣ ಬೆಳೆಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಮಧ್ಯೆ ಮಧ್ಯೆ ಮಳೆಯಾಗುತ್ತಿದ್ದರೂ ಸಾಂಪ್ರದಾಯಿಕ 48 ಕಿಲೋಮೀಟರ್ ಉದ್ದದ ನುನ್ವಾನ್–ಪಹಲ್ಗಾಮ್ ಮಾರ್ಗ ಹಾಗೂ 14 ಕಿಲೋಮೀಟರ್ ಉದ್ದದ ಬಾಲ್ಟಾಲ್ ಮಾರ್ಗ ಎರಡರಲ್ಲೂ ಮುಂಜಾನೆ ಯಾತ್ರೆ ಆರಂಭವಾಗಿದೆ.
ಪುರುಷರು, ಮಹಿಳೆಯರು ಹಾಗೂ ಸಾಧು-ಸಂತರನ್ನು ಒಳಗೊಂಡ ಯಾತ್ರಿಕರಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಹಸಿರು ನಿಶಾನೆ ತೋರಿದ ಬಳಿಕ, ಬಮ್ ಬಮ್ ಭೋಲೇ ಎಂಬ ಘೋಷಣೆಗಳ ನಡುವೆ ಸಮುದ್ರಮಟ್ಟದಿಂದ 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಗುಹಾ ದೇವಾಲಯದತ್ತ ಭಕ್ತರು ಪಾದಯಾತ್ರೆ ಆರಂಭಿಸಿದರು.
ಇದೇ ವೇಳೆ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಎರಡನೇ ತಂಡವನ್ನು ಎರಡು ಪ್ರತ್ಯೇಕ ವಾಹನ ದಳಗಳಲ್ಲಿ ಭದ್ರತಾ ವ್ಯವಸ್ಥೆಯೊಂದಿಗೆ ಕಳುಹಿಸಲಾಯಿತು. ಅಧಿಕೃತ ಅಂಕಿಅಂಶಗಳ ಪ್ರಕಾರ, ಬೆಳಗ್ಗೆ 3:13ಕ್ಕೆ 1,735 ಭಕ್ತರು ಬಾಲ್ಟಾಲ್ ಮಾರ್ಗದತ್ತ ಹಾಗೂ 3:38ಕ್ಕೆ 2,130 ಭಕ್ತರು ಪಹಲ್ಗಾಮ್ ಮಾರ್ಗದತ್ತ ಹೊರಟಿದ್ದು, ಒಟ್ಟು 3,865 ಮಂದಿ ಎರಡನೇ ತಂಡದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಈ ತಂಡದಲ್ಲಿ 2,965 ಪುರುಷರು, 618 ಮಹಿಳೆಯರು, 230 ಸಾಧುಗಳು, 48 ಸಾಧ್ವಿಯರು ಹಾಗೂ ನಾಲ್ಕು ಮಕ್ಕಳು ಸೇರಿದ್ದಾರೆ. ಒಟ್ಟು 201 ವಾಹನಗಳಲ್ಲಿ ಯಾತ್ರಿಕರು ಪ್ರಯಾಣಿಸುತ್ತಿದ್ದು, ಇದರಲ್ಲಿ 83 ಬಸ್‌ಗಳು, 14 ಮಧ್ಯಮ ಗಾತ್ರದ ವಾಹನಗಳು ಹಾಗೂ 104 ಲಘು ಮೋಟಾರು ವಾಹನಗಳಿವೆ. ಅವುಗಳಲ್ಲಿ 115 ವಾಹನಗಳು ಬಾಲ್ಟಾಲ್ ಮಾರ್ಗದ ತಂಡದಲ್ಲಿದ್ದರೆ, 86 ವಾಹನಗಳು ಪಹಲ್ಗಾಮ್ ಮೂಲ ಶಿಬಿರದತ್ತ ತೆರಳಿವೆ.
ಯಾತ್ರೆಯ ಸುರಕ್ಷತೆಗಾಗಿ ಪೊಲೀಸ್, ಸಿಆರ್‌ಪಿಎಫ್ ಹಾಗೂ ಇತರ ಭದ್ರತಾ ಪಡೆಗಳ ಸಿಬ್ಬಂದಿಯನ್ನು ಬಹುಹಂತದ ಭದ್ರತಾ ವ್ಯವಸ್ಥೆಯಲ್ಲಿ ನಿಯೋಜಿಸಲಾಗಿದೆ. 57 ದಿನಗಳ ಕಾಲ ನಡೆಯಲಿರುವ ಈ ವರ್ಷದ ಅಮರನಾಥ ಯಾತ್ರೆಯು ಆಗಸ್ಟ್ 28ರಂದು ಸಮಾಪ್ತಿಯಾಗಲಿದೆ.
ಕಳೆದ ಎರಡು ದಿನಗಳಲ್ಲಿ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಒಟ್ಟು 8,687 ಯಾತ್ರಿಕರು ಅಮರನಾಥ ಯಾತ್ರೆಗಾಗಿ ಕಾಶ್ಮೀರ ಕಣಿವೆಯತ್ತ ಪ್ರಯಾಣ ಆರಂಭಿಸಿರುವುದು ಗಮನಾರ್ಹವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.