

ಬೆಂಗಳೂರು, 29 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುತ್ತಿರುವುದೇಕೆ ಎಂಬ ಬಗ್ಗೆ ಎದ್ದಿರುವೂ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಲಿ ಕಾರಣಗಳನ್ನು ವಿವರಿಸಿ, ರಾಹುಲ್ ಗಾಂಧಿ ಅವರು ವಿದೇಶಿ ಪ್ರವಾಸದಲ್ಲಿದ್ದರು ಮತ್ತು ಇದೀಗ ಸಂಸತ್ ಅಧಿವೇಶನ ಪ್ರಾರಂಭವಾಗಿರುವುದರಿಂದ ಅದಕ್ಕೆ ಆದ್ಯತೆ ನೀಡಬೇಕಾಯಿತು ಎಂದಿದ್ದಾರೆ.
ಇಂದು ಸಂಜೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು, ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳು ಸಭೆ ನಡೆಸಿ ಎಲ್ಲವನ್ನೂ ಅಂತಿಮಗೊಳಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳ ಸೃಷ್ಟಿ ಹಾಗೂ ಆ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಅದರ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ, ಅದನ್ನು ನಾವೆಲ್ಲರೂ ಬದ್ಧತೆಯಿಂದ ಒಪ್ಪಿಕೊಳ್ಳಲೇಬೇಕಾಗುತ್ತದೆ ಎಂದರು.
ಸಂಪುಟ ವಿಸ್ತರಣೆಯ ಸಂಭಾವ್ಯ ದಿನದ ಕುರಿತು ಸುಳಿವು ನೀಡಿದ ಡಾ. ಪರಮೇಶ್ವರ್, ಇಂದು ಸಂಜೆ ಸಭೆಯಲ್ಲಿ ಎಲ್ಲವೂ ಅಂತಿಮಗೊಂಡರೆ ನಾಳೆಯೇ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜಭವನದಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದೂ ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII