
ಬೆಂಗಳೂರು, 29 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆ ಮತ್ತು ರಾಜಕೀಯ ಬೆಳವಣಿಗೆಗಳ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಲಿಂಗಾಯತ ಸಮುದಾಯಕ್ಕೆ ಸಿಗಬೇಕಾದ ಸಚಿವ ಸ್ಥಾನಗಳ ಕುರಿತು ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನಗಳ ಹಂಚಿಕೆ ಕುರಿತು ಮಾತನಾಡಿ, ಹೈಕಮಾಂಡ್ಗೆ ಎಲ್ಲ ವಿಷಯಗಳೂ ತಿಳಿದಿವೆ.
ಮುಖ್ಯಮಂತ್ರಿಗಳು, ಹಿರಿಯ ಮುಖಂಡರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರಿಗೂ ವಾಸ್ತವ ತಿಳಿದಿದ್ದು, ಎಲ್ಲವನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಹಾಗೂ ಪ್ರಮುಖ ಹುದ್ದೆಗಳ ರೇಸ್ನಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಸಚಿವರು ನಗುತ್ತಲೇ ಸ್ಪಷ್ಟನೆ ನೀಡಿದರು. ನಮ್ಮ ಹೆಸರು ಕೇಳಿಬರುತ್ತಿದೆ ಎನ್ನುವುದು ನಿಮ್ಮ ಸೃಷ್ಟಿಯಷ್ಟೇ. ಇದರ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಪಕ್ಷಕ್ಕೆ ಮತ್ತು ಮುಂದಿನ ಚುನಾವಣೆಗೆ ಯಾವುದು ಒಳಿತೋ, ಆ ಕುರಿತು ಪಕ್ಷವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.
ಇದೇ ವೇಳೆ ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡಿದ ಅವರು, ಸರ್ವಪಕ್ಷ ನಿಯೋಗ ಅಥವಾ ಸರ್ವಪಕ್ಷ ಸಭೆಯ ಅವಶ್ಯಕತೆ ಕುರಿತು ಮುಖ್ಯಮಂತ್ರಿಗಳು ದೆಹಲಿಯಿಂದ ವಾಪಸ್ ಬಂದ ಬಳಿಕ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII