
ಬೆಂಗಳೂರು, 29 ಜುಲೈ (ಹಿ.ಸ.):
ಆ್ಯಂಕರ್
ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆ ಪ್ರಮಾಣದ ಮಳೆಯಾಗದ ಕಾರಣ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಂಪೂರ್ಣವಾಗಿ ಖಾಲಿಯಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟಿಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾವೇರಿ ನೀರು ಹಂಚಿಕೆಯ ವಾಸ್ತವತೆಯನ್ನು ಬಿಚ್ಚಿಟ್ಟ ಸಚಿವರು, ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗಿ ಜಲಾಶಯಗಳು ಭರ್ತಿಯಾದರೆ ಕಾವೇರಿ ನೀರಿನ ಹಂಚಿಕೆಯಲ್ಲಿ ನಮಗೆ ಯಾವುದೇ ಸಮಸ್ಯೆಯಿರುವುದಿಲ್ಲ. ಅಂತಹ ಉತ್ತಮ ವರ್ಷಗಳಲ್ಲಿ ನಾವು ಸುಪ್ರೀಂ ಕೋರ್ಟ್ ಆದೇಶದಂತೆ ನಿಗದಿತ 177 ಟಿಎಂಸಿ ನೀರಿಗಿಂತಲೂ ಹೆಚ್ಚಿನ ನೀರನ್ನೇ ತಮಿಳುನಾಡಿಗೆ ಹರಿಸಿದ್ದೇವೆ. ಆದರೆ, ಪ್ರಕೃತಿ ಕೈಕೊಟ್ಟು ಬರಗಾಲ ಬಂದಂತಹ ಸಂಕಷ್ಟದ ಸಂದರ್ಭದಲ್ಲಿ ನೀರು ಬಿಡಲು ಯಾವುದೇ ಸಂಕಷ್ಟ ಸೂತ್ರಗಳು ಸಹಾಯಕ್ಕೆ ಬರುವುದಿಲ್ಲ ಎಂದಿದ್ದಾರೆ.
ಶಾಶ್ವತ ಪರಿಹಾರಕ್ಕಾಗಿ ಮೇಕೆದಾಟು ಅನಿವಾರ್ಯ..!!
ಈ ಕಾವೇರಿ ವಿವಾದಕ್ಕೆ ಮೇಕೆದಾಟು ಯೋಜನೆ ಒಂದೇ ಏಕೈಕ ಉತ್ತರ ಎಂದು ಪ್ರತಿಪಾದಿಸಿದ ಎಂ.ಬಿ. ಪಾಟಿಲ್, ಕಾವೇರಿ ನೀರು ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನಮಗೆ ಹೆಚ್ಚುವರಿಯಾಗಿ ಸಿಕ್ಕಿದ 14 ಟಿಎಂಸಿ ನೀರೂ ಸೇರಿ ಒಟ್ಟು 65 ಟಿಎಂಸಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಲು ಬೃಹತ್ ಜಲಾಶಯದ ವ್ಯವಸ್ಥೆ ಬೇಕೇಬೇಕು. ನಾನು ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗಲೇ ಮೇಕೆದಾಟು ಯೋಜನೆಯ ಪರಿಕಲ್ಪನೆ ರೂಪುಗೊಂಡಿತು ಎಂದರು.
ಮೇಕೆದಾಟು ಯೋಜನೆಯಿಂದ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ತಮಿಳುನಾಡಿಗೂ ಕೂಡ ಪ್ರಯೋಜನವಿದೆ. ಆದರೆ ಅಲ್ಲಿನ ಆಂತರಿಕ ರಾಜಕಾರಣ ಹಾಗೂ ರಾಜಕೀಯ ದ್ವೇಷದಿಂದಾಗಿ ಇದಕ್ಕೆ ತಡೆ ಒಡ್ಡಲಾಗುತ್ತಿದೆ. ತಮಿಳುನಾಡು ನಾಯಕರು ರಾಜಕಾರಣ ಬಿಟ್ಟು, ಮೇಕೆದಾಟು ಜಲಾಶಯದಿಂದ ಅವರಿಗೂ ದೊಡ್ಡ ಮಟ್ಟದಲ್ಲಿ ಲಾಭವಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ತಲೆದೂರಿರುವ ಕಾವೇರಿ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹಿಂದೆ ಜಲ ಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಈಗಿನ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಒಟ್ಟಾಗಿ ಕುಳಿತು, ಪ್ರಸ್ತುತ ಬಿಕ್ಕಟ್ಟಿಗೆ ಸೂಕ್ತ ಹಾಗೂ ಪರಿಣಾಮಕಾರಿ ಪರಿಹಾರವನ್ನು ಹುಡುಕಲಿದ್ದಾರೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಸಮಿತಿ ಕೂಡ ಕೇವಲ ಆದೇಶ ಹೊರಡಿಸದೆ, ರಾಜ್ಯದ ಜಲಾಶಯಗಳಲ್ಲಿನ ಈಗಿನ ನೇರ ನೀರು ಸಂಗ್ರಹಣೆಗೆ ಸಂಬಂಧಿಸಿದ ವಾಸ್ತವ ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸಚಿವ ಎಂ.ಬಿ. ಪಾಟಿಲ್ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII