
ಬೆಂಗಳೂರು, 26 ಜುಲೈ (ಹಿ.ಸ.):
ಆ್ಯಂಕರ್:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಹೊಂದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಅವಶ್ಯಕತೆ ಮತ್ತು ಮಾರ್ಗದರ್ಶನ ಸದಾ ಕಾಲ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಸಿ. ಚಂದ್ರಶೇಖರ್, ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿಯ ಕುರಿತು ಹಬ್ಬಿರುವ ವಾದ-ಪ್ರತಿವಾದಗಳನ್ನು ತಳ್ಳಿಹಾಕಿದರು. ಅವರು ಕರ್ನಾಟಕ ಕಂಡ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿದ್ದು, ಪಕ್ಷದ ಸಂಘಟನೆ ಹಾಗೂ ಸರ್ಕಾರದ ಆಡಳಿತಕ್ಕೆ ಅವರ ಅನುಭವ ಬಹಳ ಮುಖ್ಯ ಎಂದರು.
ಇದೇ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ತಲೆದೂರಿರುವ ಸಂಭಾವ್ಯ ಬರದ ಪರಿಸ್ಥಿತಿ ಹಾಗೂ ರೈತರ ಬೆಳೆ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಪರಿಹಾರ ಅನುದಾನ ಹಾಗೂ ನೆರವಿನ ಕುರಿತು ಸಂಸತ್ತಿನಲ್ಲಿ ಗಂಭೀರವಾಗಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ಎಲ್ಲಾ ಪಕ್ಷಗಳ ಸಂಸತ್ ಸದಸ್ಯರ ಸಭೆಯನ್ನು ಕರೆಯಲಾಗಿದ್ದು, ಕೇಂದ್ರದ ಮೇಲೆ ಸೂಕ್ತ ಒತ್ತಡ ಹೇರಲು ಸಿದ್ಧತೆ ನಡೆಸಲಾಗಿದೆ ಎಂದು ಜಿ.ಸಿ. ಚಂದ್ರಶೇಖರ್ ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII